ನವದೆಹಲಿ :ದೇಶಾದ್ಯಂತ ಕೋವಿಡ್ ಸೋಂಕಿತರ ಪ್ರಕರಣ ವ್ಯಾಪಕವಾಗಿ ಏರಿಕೆ ಆಗುತ್ತಿರುವ ನಡುವೆಯೂ ಸೋಂಕಿತರ ಚಿಕಿತ್ಸಾ ವೆಚ್ಚ ಭರಿಸುವ ಪ್ರತ್ಯೇಕ ಅಲ್ಪಾವಧಿಯ ಕೊರೊನಾ ಕವಚ ಆರೋಗ್ಯ ವಿಮೆಗೆ ಗ್ರಾಹಕರು ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
ಕೊರೊನಾ ಕವಚ ಆರೋಗ್ಯ ವಿಮಾ ಪಾಲಿಸಿಯನ್ನು ಪ್ರಾರಂಭಿಸಿದ ಕೆಲವೇ ದಿನಗಳಲ್ಲಿ ಎಲ್ಲಾ ವಿಮೆದಾರರು ಉತ್ತಮ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಕೋವಿಡ್ ಚಿಕಿತ್ಸಾ ವೆಚ್ಚ ಭರಿಸಲು ನೆರವಾಗಲು ಪ್ರತ್ಯೇಕ ವಿಮಾ ಪಾಲಿಸಿಗಳನ್ನು ಜುಲೈ 10ರೊಳಗೆ ಪರಿಚಯಿಸಬೇಕೆಂದು ವಿಮೆ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಐಆರ್ಡಿಎಐ) ಸೂಚಿಸಿತ್ತು.
ಆರೋಗ್ಯ ಹಾಗೂ ಸಾಮಾನ್ಯ ವಿಮೆ ಕಂಪನಿಗಳು ಅಲ್ಪಾವಧಿಯ ಕೋವಿಡ್ ಕವಚ ವಿಮೆ ಪಾಲಿಸಿ ಪರಿಚಯಿಸುವುದನ್ನು ಪ್ರಾಧಿಕಾರವು ಕಡ್ಡಾಯ ಮಾಡಿತ್ತು. ಬಹುತೇಕ ಕಂಪನಿಗಳು ಈ ಪಾಲಿಸಿಯನ್ನು ಜಾರಿಗೆ ತಂದಿವೆ. ನಾನಾ ವಿಮಾ ಕಂಪನಿಗಳು ಪ್ರಕಟಿಸಿರುವ ಕೊರೊನಾ ಕವಚ ಪಾಲಿಸಿಯಡಿ, ಮೂರುವರೆ (105 ದಿನ), ಆರೂವರೆ (105 ದಿನ) ಹಾಗೂ ಒಂಬ್ಬತ್ತುವರೆ ತಿಂಗಳ (285 ದಿನಗಳ) ಅಲ್ಪಾವಧಿ ವಿಮೆ ಸೌಲಭ್ಯವು ಇನ್ನೂ ಮುಂದೆಯೂ ಲಭ್ಯವಾಗಲಿದೆ. ಜನರು ಈ ಯೋಜನೆಗಳನ್ನು ಖರೀದಿಸಲು ಸಾಕಷ್ಟು ಉತ್ಸುಕರಾಗಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ.
ಈ ಯೋಜನೆಗಳು ಪಾಲಿಸಿ ಬಜಾರ್‌ನ ವೆಬ್‌ಸೈಟ್‌ನಲ್ಲಿ ನೇರವಾಗಿ ಲಭ್ಯವಾಗುತ್ತಿವೆ. ಕಂಪನಿಯು ದಿನಕ್ಕೆ 300-500 ಪಾಲಿಸಿಗಳನ್ನು ಮಾರಾಟ ಮಾಡುತ್ತಿದೆ" ಎಂದು ಪಾಲಿಸಿ ಬಜಾರ್‌ನ ಮುಖ್ಯ ಆರೋಗ್ಯ ವಿಮೆಯ ಅಮುತ್ ಛಬ್ರ ಹೇಳಿದರು. ಪಾಲಿಸಿಗಳು ಮಾಸಿಕ 208 ರೂ.ಯಂತೆ ಕಡಿಮೆ ದರದಲ್ಲಿದ್ದು ಸಾಕಷ್ಟು ಅಗ್ಗದ ಮೊತ್ತದಿಂದ ಆಕರ್ಷಿಸುತ್ತಿವೆ. ಮಹಾರಾಷ್ಟ್ರ, ತಮಿಳುನಾಡು, ಕರ್ನಾಟಕ, ದೆಹಲಿ ಎನ್‌ಸಿಆರ್ ಜನರು ಭಾರಿ ಆಸಕ್ತಿ ತೋರಿಸುತ್ತಿದ್ದಾರೆ ಎಂದರು.