ನವದೆಹಲಿ: ಒಂದು ವಾರಗಳ ಕಾಲ(ಸೆಪ್ಟೆಂಬರ್ 21ರಿಂದ 27ರವರೆಗೆ) ಅಮೆರಿಕ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಬಿಲ್ ಆ್ಯಂಡ್ ಮಿಲಿಂದ್ ಫೌಂಡೇಷನ್ 2019ರ ಸಾಲಿನ 'ಗ್ಲೋಬಲ್ ಗೋಲ್‌ಕೀಪರ್ಸ್ ಗೋಲ್ಸ್ ಅವಾರ್ಡ್' ನೀಡಿ ಗೌರವಿಸಲಿದೆ.
ನಾಳೆಯಿಂದ ಮೋದಿ ಮಹತ್ವದ ಅಮೆರಿಕ ಪ್ರವಾಸ; 'ಗ್ಲೋಬಲ್ ಗೋಲ್‌ಕೀಪರ್ಸ್ ಗೋಲ್ಸ್' ಗೌರವ
ಅಮೆರಿಕದ ಪ್ರಮುಖ ಇಂಧನ ಕಂಪನಿಗಳ ಸಿಇಒಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಮಹತ್ವದ ಮಾತುಕತೆ ನಡೆಸಲಿದ್ದಾರೆ. ಹ್ಯೂಸ್ಟನ್ನಲ್ಲಿ ನಡೆಯವ ಭಾರತೀಯ ಸಮುದಾಯದ ಕಾರ್ಯಕ್ರಮವೊಂದಲ್ಲೂ ಅವರು ಪಾಲ್ಗೊಳ್ಳಲಿದ್ದಾರೆ. ಬಳಿಕ ನ್ಯೂಯಾರ್ಕ್ನಲ್ಲಿ ಜನರಲ್ ಅಸೆಂಬ್ಲಿಯ 74ನೇ ಅಧಿವೇಶನವನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಮಾತುಕತೆ ನಡೆಸಲಿದ್ದು, ಉಭಯ ದೇಶಗಳ ಮತ್ತು ಜನರಿಗೆ ಅನುಕೂಲವಾಗುವಂತಹ ದ್ವಿಪಕ್ಷೀಯ ಸಂಬಂಧಗಳ ಕುರಿತು ಮಹತ್ವದ ಚರ್ಚೆ ನಡೆಯಲಿದೆ.
ಪ್ರಧಾನಿ ಮೋದಿ ನಾಳೆ ದೆಹಲಿಯಿಂದ ಅಮೆರಿಕಗೆ ಪ್ರಯಾಣ ಬೆಳೆಸಲಿದ್ದಾರೆ. ಇದಕ್ಕೂ ಮೊದಲು ಮಾತನಾಡಿದ ಅವರು, ಮುಂಬರುವ ಅಮೆರಿಕ ಭೇಟಿಯು ಭಾರತಕ್ಕೆ ಹಲವು ಅವಕಾಶಗಳನ್ನು ತೆರದಿಡಲಿದೆ. ಜಾಗತಿಕ ನಾಯಕತ್ವ ಮತ್ತು ದ್ವಿಪಕ್ಷೀಯ ಬಾಂಧವ್ಯವನ್ನು ಇನ್ನಷ್ಟು ವೃದ್ಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಭಾರತ-ಅಮೆರಿಕದ ನಡುವೆ ಇಂಧನ ಸಹಭಾಗಿತ್ವವನ್ನು ಹೆಚ್ಚಿಸುವ ಉದ್ದೇಶದಿಂದ ಅಲ್ಲಿನ ಪ್ರಮುಖ ತೈಲ ಕಂಪನಿಗಳ ಸಿಇಒಗಳೊಂದಿಗೆ ಸಂವಹನ ನಡೆಸಲಿದ್ದೇನೆ. ಇಂಧನ ಕ್ಷೇತ್ರವು ಪರಸ್ಪರರಿಗೆ ಲಾಭದಾಯಕ ಸಹಕಾರದ ಹೊಸ ವಲಯವಾಗಿ ಹೊರಹೊಮ್ಮಲಿದೆ. ಇದು ನಮ್ಮ ದ್ವಿಪಕ್ಷೀಯ ಸಂಬಂಧದ ಪ್ರಮುಖ ಅಂಶವಾಗಿದೆ ಎಂದು ಪ್ರಧಾನಿ ತಿಳಿಸಿದ್ರು.