ನವದೆಹಲಿ: ದೇಶದ ಎಲ್ಲಾ ಸಹಕಾರಿ ಬ್ಯಾಂಕ್ಗಳನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಮೇಲ್ವಿಚಾರಣಾ ಅಧಿಕಾರದ ವ್ಯಾಪ್ತಿಗೆ ತರುವ ಕೇಂದ್ರ ಸರ್ಕಾರದ ಸುಗ್ರೀವಾಜ್ಞೆಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ ಹಾಕಿದ್ದಾರೆ.
ದೇಶಾದ್ಯಂತ 1,500ಕ್ಕೂ ಹೆಚ್ಚು ನಗರ ಮತ್ತು ಬಹು ರಾಜ್ಯ ಸಹಕಾರಿ ಬ್ಯಾಂಕ್ಗಳಲ್ಲಿ 8.6 ಕೋಟಿಗೂ ಹೆಚ್ಚು ಠೇವಣಿದಾರರಿದ್ದಾರೆ. ಸಹಕಾರಿ ಬ್ಯಾಂಕ್ಗಳಲ್ಲಿ ಠೇವಣಿದಾರರ 4.84 ಲಕ್ಷ ಕೋಟಿ ಹಣದ ಸುರಕ್ಷತೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದರು.
ಕಳೆದ ವರ್ಷ ಪಂಜಾಬ್ ಮತ್ತು ಮಹಾರಾಷ್ಟ್ರ ಸಹಕಾರಿ (ಪಿಎಂಸಿ) ಬ್ಯಾಂಕ್ ವೈಫಲ್ಯದ ನಂತರ ಕೇಂದ್ರ ಕ್ಯಾಬಿನೆಟ್ ಫೆಬ್ರವರಿಯಲ್ಲಿ ದೇಶದ ಸಹಕಾರಿ ಬ್ಯಾಂಕ್ಗಳನ್ನು ಬಲಪಡಿಸಲು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಗೆ ತಿದ್ದುಪಡಿ ಮಾಡಿತ್ತು. 2020ರ ಬಜೆಟ್ ವೇಳೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಹಕಾರಿ ಬ್ಯಾಂಕ್ಗಳನ್ನು ಆರ್‌ಬಿಐ ವ್ಯಾಪ್ತಿಗೆ ತರುವುದಾಗಿ ಘೋಷಿಸಿದ್ದರು.
ಈ ಕುರಿತಂತೆ ಕಳೆದ ಬುಧವಾರ (ಜೂ. 24) ನಡೆದಿದ್ದ ಸಚಿವ ಸಂಪುಟ ಸಭೆಯ ಒಪ್ಪಿಗೆ ಪಡೆದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆ ಹೊರಡಿಸಿತ್ತು. ನಂತರ ಇದನ್ನು ರಾಷ್ಟ್ರಪತಿಗಳ ಅಂಕಿತಕ್ಕೆ ಕಳುಹಿಸಲಾಗಿತ್ತು. ಶನಿವಾರ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಸುಗ್ರೀವಾಜ್ಞೆಗೆ ಅಂಕಿತ ಹಾಕಿದ್ದಾರೆ.