ನವದೆಹಲಿ: ಬಾಂಗ್ಲಾದೇಶವನ್ನು ಮೆಚ್ಚಿಸುವ ಪ್ರಯತ್ನದ ಭಾಗವಾಗಿ ಚೀನಾ ಜುಲೈ 1ರಿಂದ ಜಾರಿಗೆ ಬರುವಂತೆ ಶೇ. 97ರಷ್ಟು ಉತ್ಪನ್ನಗಳಿಗೆ ಸುಂಕ ವಿನಾಯಿತಿ ನೀಡುವ ಮೂಲಕ ಆ ದೇಶಕ್ಕೆ ಭಾರಿ ವ್ಯಾಪಾರ ಉತ್ತೇಜನ ನೀಡಿದೆ.
ಕೋವಿಡ್-19 ಸಾಂಕ್ರಾಮಿಕ ಸಮಯದಲ್ಲಿ ಬಾಂಗ್ಲಾದೇಶ ಪ್ರಧಾನಿ ಶೇಖ್ ಹಸೀನಾ ಮತ್ತು ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ತಮ್ಮ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ಬಗ್ಗೆ ಚರ್ಚೆ ನಡೆಸಿದ ಒಂದು ತಿಂಗಳ ನಂತರ ಈ ನಿರ್ಧಾರ ಹೊರ ಬಂದಿದೆ.
ಗಾಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ಸಂಘರ್ಷ ತಾರಕಕ್ಕೇರಿ ಉಭಯ ರಾಷ್ಟ್ರಗಳ ಸಂಬಂಧ ಹಳಸಿದೆ. ಇದೀಗ ತನ್ನ ಹಳೆಯ ಆಕ್ರಮಣಕಾರಿ ವಿದೇಶಾಂಗ ನೀತಿಗೆ ಮೊರೆ ಹೋಗಿರುವ ಚೀನಾ, ಭಾರತದ ನೆರೆಯ ಆಪ್ತ ರಾಷ್ಟ್ರ ಬಾಂಗ್ಲಾದೇಶವನ್ನು ತನ್ನತ್ತ ಸೆಳೆದುಕೊಳ್ಳುವ ಕಸರತ್ತು ಮುಂದುವರೆಸಿದೆ.
ಇದೇ ವೇಳೆ ನೆರೆಯ ರಾಷ್ಟ್ರ ನೇಪಾಳ ತನ್ನ ಭೂಪಟವನ್ನೇ ಪರಿಷ್ಕರಿಸಿ, ಭಾರತದ ಪ್ರದೇಶಗಳನ್ನು ತನ್ನೊಳಗೆ ಸೇರಿಸಿಕೊಂಡಿತ್ತು. ಈ ಮೂಲಕ ಏಷ್ಯಾ ಖಂಡದ ಭಾರತದ ನೆರೆಹೊರೆ ರಾಷ್ಟ್ರಗಳನ್ನು ಮೆಚ್ಚಿಸಲು ವಾಣಿಜ್ಯ ತಂತ್ರದ ಮುಖೇನ ಹೊಸ ರಾಜಕೀಯ ನಾಟಕ ಶುರು ಮಾಡುತ್ತಿದೆ.
ಶೇ. 97ರಷ್ಟು ವಸ್ತುಗಳನ್ನು ಚೀನಾ ಸುಂಕದಿಂದ ವಿನಾಯಿತಿ ನೀಡುವುದಾಗಿ ಘೋಷಿಸಿದೆ ಎಂದು ಬಾಂಗ್ಲಾದೇಶದ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ.
ಸರ್ಕಾರದ ಆರ್ಥಿಕ ರಾಜತಾಂತ್ರಿಕತೆ ಮತ್ತು ಬಾಂಗ್ಲಾದೇಶ ಹಾಗೂ ಚೀನಾ ನಡುವಿನ ಪತ್ರಗಳ ವಿನಿಮಯದ ಫಲಿತಾಂಶದ ಭಾಗವಾಗಿ ಬಾಂಗ್ಲಾದ 97ರಷ್ಟು ಉತ್ಪನ್ನಗಳಿಗೆ ಸುಂಕ ಮುಕ್ತಗೊಳಿಸಿದೆ. ಈ ಬಗ್ಗೆ ಚೀನಾ ರಾಜ್ಯ ಮಂಡಳಿಯ ಸುಂಕ ಆಯೋಗ ಇತ್ತೀಚೆಗೆ ನೋಟಿಸ್ ನೀಡಿದೆ ಎಂದು ಢಾಕಾ ಟ್ರಿಬ್ಯೂನ್ ಸಚಿವಾಲಯದ ಪ್ರಕಟಣೆ ಉಲ್ಲೇಖಿಸಿ ವರದಿ ಮಾಡಿದೆ.
ಈ ಪ್ರಕಟಣೆಯೊಂದಿಗೆ ಬಾಂಗ್ಲಾದೇಶದ ಒಟ್ಟು 8,256 ಉತ್ಪನ್ನಗಳು ಶೇ. 97ರಷ್ಟು ಉತ್ಪನ್ನಗಳ ಅಡಿಯಲ್ಲಿ ಬರಲಿದ್ದು, ಅವುಗಳನ್ನು ಸುಂಕದಿಂದ ವಿನಾಯಿತಿ ನೀಡಲಾಗುತ್ತದೆ. ಬಾಂಗ್ಲಾದೇಶದ 3,095ಉತ್ಪನ್ನಗಳು ಏಷ್ಯಾ-ಪೆಸಿಫಿಕ್ ವ್ಯಾಪಾರ ಒಪ್ಪಂದದ (ಎಪಿಟಿಎ) ಅಡಿಯಲ್ಲಿ ಚೀನಾ ಮಾರುಕಟ್ಟೆಗೆ ಸುಂಕ ರಹಿತವಾಗಿ ಪ್ರವೇಶ ಪಡೆಯಲಿವೆ. ಹೊಸ ಪ್ರಕಟಣೆಯೊಂದಿಗೆ ಜುಲೈ 1ರಿಂದ 97ರಷ್ಟು ಬಾಂಗ್ಲಾದೇಶದ ಉತ್ಪನ್ನಗಳು ಈ ಶೂನ್ಯ ಸುಂಕ ಕ್ಲಬ್‌ಗೆ ಸೇರಲಿವೆ. ಇದು ಚೀನಾದ ಮಾರುಕಟ್ಟೆಗೆ ಬಾಂಗ್ಲಾದ ಶೂನ್ಯ ಸುಂಕ ಉತ್ಪನ್ನಗಳ ಸಂಖ್ಯೆ 8,256ಕ್ಕೆ ಏರಿಸಿದೆ ಎಂದು ವರದಿ ತಿಳಿಸಿದೆ.
ಇಂಡೋನೇಷ್ಯಾದಲ್ಲಿ ಈ ವಾರ ನಡೆದ ಏಷ್ಯಾನ್-ಆಫ್ರಿಕನ್ ಸಮ್ಮೇಳನದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್ ಪಿಂಗ್, ಒಂದು ವರ್ಷದೊಳಗೆ ಚೀನಾ ಕಡಿಮೆ ಅಭಿವೃದ್ಧಿ ಹೊಂದಿರುವ ದೇಶಗಳಿಗೆ (ಎಲ್‌ಡಿಸಿ) 97ರಷ್ಟು ಉತ್ಪನ್ನಗಳಿಗೆ ಸುಂಕ ರಹಿತ ಮಾರುಕಟ್ಟೆ ಪ್ರವೇಶ ನೀಡುವುದಾಗಿ ಘೋಷಿಸಿದ್ದರು.