ನವದೆಹಲಿ / ಬೀಜಿಂಗ್:ಚೀನಾ ಭಾನುವಾರ ಭಾರತದೊಂದಿಗೆ ಶಾಂತಿ, ಪಾಲುದಾರಿಕೆ ಮತ್ತು ಸಮೃದ್ಧಿಯ ಕುರಿತು ಮಾತನಾಡುತ್ತಾ, ಸಂವಾದ ಮತ್ತು ಸಮಾಲೋಚನೆಗಳ ಮೂಲಕ ದೆಹಲಿಯೊಂದಿಗೆ ಗಡಿ ವಿವಾದ ಬಗೆಹರಿಸಲು ಬದ್ಧವಾಗಿದೆ ಎಂದಿದೆ. ಮತ್ತೊಂದೆಡೆ, ಈ ವರ್ಷದ ಜುಲೈ ಮುನ್ನ ಅರುಣಾಚಲ ಪ್ರದೇಶದ ಭಾರತದ ಗಡಿಯ ಸಮೀಪವಿರುವ ಟಿಬೆಟ್‌ಗೆ ಬುಲೆಟ್ ರೈಲು ಓಡಿಸಲಿದೆ.
ಕಳೆದ ವರ್ಷ ಗಡಿ ಪ್ರದೇಶದಲ್ಲಿ ಏನಾಯಿತು ಎಂಬುದರ ಸರಿ ಮತ್ತು ತಪ್ಪುಗಳು ಸ್ಪಷ್ಟವಾಗಿವೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ತಮ್ಮ ವಾರ್ಷಿಕ ಪತ್ರಿಕಾಗೋಷ್ಠಿಯಲ್ಲಿ ಭಾನುವಾರ ಹೇಳಿದ್ದರು. ಮುಖಾಮುಖಿಯಾಗಿ ನಿಂತರೆ ಸಮಸ್ಯೆ ಇತ್ಯರ್ಥವಾಗುವುದಿಲ್ಲ ಎಂಬುದು ಮತ್ತೆ ಸಾಬೀತಾಗಿದೆ. ಶಾಂತಿಯುತ ಮಾತುಕತೆಗೆ ಮರಳುವುದು ಸರಿಯಾದ ಮಾರ್ಗವಾಗಿದೆ ಎಂದರು.
ಇನ್ನೊಂದು ಕಡೆ, ಚೀನಾ ಈ ವರ್ಷದ ಜುಲೈಗೂ ಮುನ್ನ ಅರುಣಾಚಲ ಪ್ರದೇಶದ ಭಾರತದ ಗಡಿಯ ಸಮೀಪವಿರುವ ಟಿಬೆಟ್‌ಗೆ ಬುಲೆಟ್ ರೈಲು ಓಡಿಸಲಿದೆ. ಚೀನಾದ ಎಲ್ಲಾ ಪ್ರಮುಖ್ಯ ಪ್ರಾಂತೀಯ ಪ್ರದೇಶಗಳಿಗೆ ಹೈಸ್ಪೀಡ್ ರೈಲು ಸೇವೆ ಪ್ರಾರಂಭಿಸಲಾಗಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಕ್ರಿಪ್ಟೋಕರೆನ್ಸಿಗೆ ಕಾನೂನು ಅನುಮತಿ ನೀಡುವಿಕೆ ಪರಿಶೀಲನೆಗೆ ಸಮಿತಿ ರಚನೆ
ಪ್ರಾದೇಶಿಕ ರಾಜಧಾನಿ ಲಾಸಾಗೆ 435 ಕಿ.ಮೀ ರೈಲು ಸಂಪರ್ಕವು ಆಂತರಿಕ ದಹನ ಮತ್ತು ವಿದ್ಯುತ್ನಿಂದ ಕೂಡಿದ ಫಕ್ಸಿಂಗ್ ಹೈಸ್ಪೀಡ್ ರೈಲುಗಳನ್ನು ಓಡಿಸಲಿದೆ ಎಂದು ಚೀನಾ ಸ್ಟೇಟ್ ರೈಲ್ವೆ ಗ್ರೂಪ್ ಕಂಪನಿ ಲಿಮಿಟೆಡ್‌ನ ಮಂಡಳಿಯ ಅಧ್ಯಕ್ಷ ಲು ಡಾಂಗ್‌ಫು ಶನಿವಾರ ಸರ್ಕಾರಿ ಸಿನ್ಹುವಾ ಸುದ್ದಿ ಸಂಸ್ಥೆಗೆ ತಿಳಿಸಿದ್ದರು.
ಪೂರ್ವ ಟಿಬೆಟ್‌ನ ಲಾಸಾ ಅನ್ನು ನೈಂಗ್‌ಚಿಯೊಂದಿಗೆ ಸಂಪರ್ಕಿಸುವ ರೈಲ್ವೆ ಮಾರ್ಗ 2014ರಲ್ಲಿ ನಿರ್ಮಾಣ ಪ್ರಾರಂಭವಾಗಿತ್ತು. ಇದು ಟಿಬೆಟ್‌ನ ಮೊದಲ ವಿದ್ಯುದ್ದೀಕೃತ ರೈಲುಮಾರ್ಗವಾಗಿದ್ದು, ಜೂನ್ 2021ರಲ್ಲಿ ಕಾರ್ಯಾಚರಣೆ ಪ್ರಾರಂಭಿಸಲಿದೆ. ಟ್ರ್ಯಾಕ್ ನಿರ್ಮಾಣದ ಕಾರ್ಯವು 2020ರ ಅಂತ್ಯದ ವೇಳೆಗೆ ಪೂರ್ಣಗೊಂಡಿದೆ ಎಂದು ವರದಿ ತಿಳಿಸಿದೆ.
ಚೀನಾ ರಾಷ್ಟ್ರೀಯ ರೈಲ್ವೆ ಸಮೂಹದ ಅಂಗಸಂಸ್ಥೆಯಾದ ಟಿಬೆಟ್ ರೈಲ್ವೆ ಕನ್ಸ್ಟ್ರಕ್ಷನ್ ಕಂಪನಿ ಲಿಮಿಟೆಡ್ ಪ್ರಕಾರ, ರೈಲ್ವೆ ಗಂಟೆಗೆ 160 ಕಿ.ಮೀ ವೇಗ ಹೊಂದಿದೆ. ಚೀನಾ ತನ್ನ ಹೈಸ್ಪೀಡ್ ರೈಲು ಜಾಲದ ಕಾರ್ಯಾಚರಣೆಯ ಒಟ್ಟು ಉದ್ದವನ್ನು 2025ರ ವೇಳೆಗೆ ಸುಮಾರು 50,000 ಕಿ.ಮೀ.ಗೆ ವಿಸ್ತರಿಸುವ ಗುರಿ ಹೊಂದಿದೆ.
ಹೈಸ್ಪೀಡ್ ರೈಲ್ವೆ ಜಾಲವು ಶೇ 98ರಷ್ಟು ನಗರಗಳನ್ನು 5,00,000ಕ್ಕೂ ಹೆಚ್ಚು ನಿವಾಸಿಗರನ್ನು ಒಳಗೊಂಡಿರುತ್ತದೆ. ಚೀನಾದ ಸ್ವಯಂ-ಅಭಿವೃದ್ಧಿ ಹೊಂದಿದ ಫಕ್ಸಿಂಗ್ ರೈಲುಗಳು ಈಗ 160 ಕಿ.ಮೀ.ನಿಂದ 350 ಕಿ.ಮೀ ವೇಗದಲ್ಲಿ ಚಲಿಸುತ್ತವೆ ಎಂದು ಲು ಹೇಳಿದರು.