ನವದೆಹಲಿ :ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಪರಿಹಾರ ಕಾನೂನಿನ ನಿಬಂಧನೆಗಳನ್ನು ಉಲ್ಲಂಘಿಸಿ ಕೇಂದ್ರ ಸರ್ಕಾರವು ಕಳೆದ ಹಣಕಾಸು ವರ್ಷದ ಅಕ್ಟೋಬರ್-ಜನವರಿ ಅವಧಿಯಲ್ಲಿ ರಾಜ್ಯ ಸರ್ಕಾರಗಳಿಗೆ ನೀಡಬೇಕಿದ್ದ ಸುಮಾರು 48,000 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.
2017ರ ಜುಲೈ ಜಿಎಸ್‌ಟಿ ಅನುಷ್ಠಾನದ ಪರಿಹಾರ ಕಾನೂನು ಅಡಿ ತಮ್ಮ ಆದಾಯ ಸಂಗ್ರಹಣೆಯಲ್ಲಿ ಶೇ.14ರಷ್ಟು ವಾರ್ಷಿಕ ಬೆಳವಣಿಗೆ ದಾಖಲಿಸದ ರಾಜ್ಯಗಳಿಗೆ ಐದು ವರ್ಷಗಳ ಅವಧಿಗೆ ಕೇಂದ್ರ, ಕಾನೂನು ಬದ್ಧವಾಗಿ ಪರಿಹಾರ ನೀಡಬೇಕು. ಪ್ರತಿ ರಾಜ್ಯಕ್ಕೆ ಪರಿಹಾರದ ಪ್ರಮಾಣವನ್ನು 2015-16ನೇ ಸಾಲಿನ ಬೇಸ್ ಇಯರ್ ಆದಾಯ ಸಂಗ್ರಹಣೆ ಗಣನೆಗೆ ತೆಗೆದುಕೊಳ್ಳಬೇಕು.
ಅಕ್ಟೋಬರ್-ನವೆಂಬರ್ ಅವಧಿಯಲ್ಲಿ ಜಿಎಸ್‌ಟಿ ಪರಿಹಾರ ಕಾನೂನಿನಡಿಯಲ್ಲಿ ರಾಜ್ಯಗಳಿಗೆ 14,000 ಕೋಟಿ ರೂ. ಬಾಕಿ ಉಳಿದಿದೆ ಎಂದು ಹಣಕಾಸು ಸಚಿವಾಲಯದ ಮೂಲಗಳು ತಿಳಿಸಿವೆ. ಡಿಸೆಂಬರ್-ಜನವರಿ ಅವಧಿಯಲ್ಲಿ ರಾಜ್ಯಗಳಿಗೆ ಪಾವತಿಸದ ಜಿಎಸ್‌ಟಿ ಪರಿಹಾರ ಬಾಕಿ ಸುಮಾರು 34,000 ಕೋಟಿ ರೂ.ಯಷ್ಟಿದೆ ಎಂದು ಮೂಲಗಳು ಈಟಿವಿ ಭಾರತ್ಗೆ ತಿಳಿಸಿವೆ. ಸುಮಾರು 48,000 ಕೋಟಿ ರೂ. ಬಾಕಿ ಮೊತ್ತ ಅಕ್ಟೋಬರ್-ನವೆಂಬರ್ ಮತ್ತು ಡಿಸೆಂಬರ್- ಜನವರಿ ಅವಧಿಗೆ ಸಂಬಂಧಿಸಿದೆ.
2017ರ ಜಿಎಸ್‌ಟಿ (ರಾಜ್ಯಗಳಿಗೆ ಪರಿಹಾರ) ಕಾಯ್ದೆಯ ಸೆಕ್ಷನ್ 7 (2)ರ ಪ್ರಕಾರ, ಪರಿಹಾರದ ಮೊತ್ತವನ್ನು ತಾತ್ಕಾಲಿಕವಾಗಿ ಲೆಕ್ಕ ಹಾಕಲಾಗುತ್ತದೆ ಮತ್ತು ಪ್ರತಿ ಎರಡು ತಿಂಗಳ ಅವಧಿಯ ಕೊನೆಯಲ್ಲಿ ರಾಜ್ಯಗಳಿಗೆ ಬಿಡುಗಡೆ ಮಾಡಲಾಗುತ್ತದೆ. ಕಂಟ್ರೋಲರ್ ಮತ್ತು ಆಡಿಟರ್-ಜನರಲ್ ಆಫ್ ಇಂಡಿಯಾ (ಸಿಎಜಿ) ಲೆಕ್ಕ ಪರಿಶೋಧಿಸಿದಂತೆ ಅಂತಿಮ ಆದಾಯದ ಅಂಕಿ-ಅಂಶಗಳನ್ನು ಸ್ವೀಕರಿಸಿದ ನಂತರ ಹಣಕಾಸಿನ ವರ್ಷದ ಅಂತಿಮ ಪರಿಹಾರ ಮೊತ್ತವನ್ನು ಲೆಕ್ಕ ಹಾಕಲಾಗುತ್ತದೆ.