ನವದೆಹಲಿ: ನೆರೆ ಪರಿಹಾರ ಸೇರಿದಂತೆ ಇತರೆ ವಿಚಾರಗಳಲ್ಲಿ ಕರ್ನಾಟಕವನ್ನು ಕಡೆಗಣಿಸಿಕೊಂಡು ಬರುತ್ತಿರುವ ಕೇಂದ್ರದ ಮಲತಾಯಿ ಧೋರಣೆ ಮತ್ತೆ ಮುಂದುವರಿದಿದೆ. ಕೊರೊನಾ ಮತ್ತು ಲಾಕ್ಡೌನ್ನಿಂದ ತತ್ತರಿಸಿರುವ ರಾಜ್ಯಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದಂತೆ ಕಂಡು ಬರುತ್ತಿದೆ.
15ನೇ ಹಣಕಾಸು ಆಯೋಗವು ಶಿಫಾರಸು ಮಾಡಿದಂತೆ ಕೊರೊನಾ ಸಾಂಕ್ರಾಮಿಕ ಪ್ರೇರೇಪಿತ ಆದಾಯ ಕೊರತೆ ಅನುದಾನದ 8ನೇ ಸಮ ಮಾಸಿಕ ಕಂತಿನಡಿ 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ.
ಆಂಧ್ರಪ್ರದೇಶ, ತಮಿಳುನಾಡು ಸೇರಿದಂತೆ ಒಟ್ಟು 14 ರಾಜ್ಯಗಳಿಗೆ 6,195.08 ಕೋಟಿ ರೂ. ಅನುದಾನ ರಿಲೀಸ್ ಆಗಿದ್ದು, 15ನೇ ಹಣಕಾಸು ಸಚಿವಾಲಯ ಈ ಕುರಿತು ಶಿಫಾರಸು ಮಾಡಿತ್ತು. ಆದರೆ ಕರ್ನಾಟಕಕ್ಕೆ ಯಾವುದೇ ಅನುದಾನ ಸಿಕ್ಕಿಲ್ಲ.
ಆಂಧ್ರಪ್ರದೇಶ, ಅಸ್ಸೋಂ, ಹಿಮಾಚಲ ಪ್ರದೇಶ, ಕೇರಳ, ಮಣಿಪುರ, ಮೇಘಾಲಯ, ಮಿಜೋರಾಂ, ನಾಗಾಲ್ಯಾಂಡ್, ಪಂಜಾಬ್, ಸಿಕ್ಕಿಂ, ತಮಿಳುನಾಡು, ತ್ರಿಪುರ, ಉತ್ತರಾಖಂಡ್ ಮತ್ತು ಪಶ್ಚಿಮ ಬಂಗಾಳಗಳು ಅನುದಾನ ಪಡೆದಿರುವ 14 ರಾಜ್ಯಗಳಾಗಿವೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್-ಅಕ್ಟೋಬರ್ ಅವಧಿಯಲ್ಲಿ ಇದೇ ರೀತಿಯ ಅನುದಾನ ಬಿಡುಗಡೆ ಮಾಡಲಾಗಿತ್ತು.
ಕೊರೊನಾ ವೈರಸ್ ಸಾಂಕ್ರಾಮಿಕದಿಂದ ಉಂಟಾದ ಅಡೆತಡೆಗಳಿಂದಾಗಿ ಕೇಂದ್ರ ಮತ್ತು ರಾಜ್ಯಗಳು ಆದಾಯದ ಕೊರತೆಯೊಂದಿಗೆ ಹೋರಾಡುತ್ತಿವೆ. ರಾಜ್ಯಗಳಿಗೆ ಕೇಂದ್ರದ ನೆರವು ನೀಡುವ ಕುರಿತು ನಿರಂತರ ಚರ್ಚೆ ನಡೆಯುತ್ತಿವೆ. ಜಿಎಸ್ಟಿ ಪರಿಹಾರ ಸೆಸ್ನ ಕೊರತೆಯು ಇತ್ತೀಚಿನ ತಿಂಗಳಲ್ಲಿ ಹೆಚ್ಚು ಗಮನ ಸೆಳೆಯಿತು. ಜಿಎಸ್ಟಿ ಪರಿಹಾರ ಸೆಸ್ ಕೊರತೆ ಪೂರೈಸಲು ಹಣಕಾಸು ಸಚಿವಾಲಯವು ಇತ್ತೀಚೆಗೆ 16 ರಾಜ್ಯಗಳು ಮತ್ತು 3 ಕೇಂದ್ರಾಡಳಿತ ಪ್ರದೇಶಗಳಿಗೆ ವಿಶೇಷ ವಿಂಡೋ ಅಡಿಯಲ್ಲಿ 6,000 ಕೋಟಿ ರೂ. ನೀಡಿತ್ತು.