ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಹಣದುಬ್ಬರ ಸಂಬಂಧ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರು ಕೇಂದ್ರದ ವಿರುದ್ಧ ಹರಿಹಾಯ್ದಿದ್ದು, ತೆರಿಗೆ ಗಳಿಸಲು ಕೇಂದ್ರ ಸರ್ಕಾರವು ಜನರನ್ನು 'ಹಣದುಬ್ಬರದ ಕೆಸರಿನ ಕಂದಕಕ್ಕೆ' ತಳ್ಳುತ್ತಿದೆ ಎಂದು ಆರೋಪಿಸಿದ್ದಾರೆ.
ಹಣದುಬ್ಬರವು ಒಂದು ಶಾಪವಾಗಿದೆ. ತೆರಿಗೆ ಗಳಿಸಲು ಕೇಂದ್ರ ಸರ್ಕಾರವು ಜನರನ್ನು ಹಣದುಬ್ಬರದ ಹುದಲಿಗೆ ನೂಕುತ್ತಿದೆ ಎಂದು ರಾಹುಲ್ ಗಾಂಧಿ ಹಿಂದಿಯಲ್ಲಿ ಟ್ವೀಟ್ ಮಾಡಿ ತಮ್ಮ ಆಕ್ರೋಶ ಹೊರ ಹಾಕಿದ್ದಾರೆ.
ದೇಶದ ವಿನಾಶದ ವಿರುದ್ಧ ನಿಮ್ಮ ಧ್ವನಿ ಎತ್ತಿ. ಬೆಲೆ ಏರಿಕೆ ಅಭಿಯಾನದ ವಿರುದ್ಧ ಮಾತನಾಡಲು ನಮ್ಮೊಂದಿಗೆ ಸೇರಿಕೊಳ್ಳಿ ಎಂದು ಕರೆ ನೀಡಿದ್ದಾರೆ. ಹೆಚ್ಚುತ್ತಿರುವ ಇಂಧನ ಮತ್ತು ಎಲ್‌ಪಿಜಿಯ ಬೆಲೆಗಳ ವಿರುದ್ಧ ಕಾಂಗ್ರೆಸ್ ಪ್ರತಿಭಟನೆ ನಡೆಸುತ್ತಿರುವುದು ಟ್ವೀಟ್ ಜತೆಗೆ ಹಂಚಿಕೊಂಡ ವಿಡಿಯೋದಲ್ಲಿದೆ.
ಕಳೆದ ಕೆಲವು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ತೀವ್ರವಾಗಿ ಏರಿಕೆಯಾಗಿದ್ದು, ಕೆಲವು ನಗರಗಳಲ್ಲಿ ಪೆಟ್ರೋಲ್ 100 ರೂ. ಮುಟ್ಟಿದೆ. ಹೆಚ್ಚುತ್ತಿರುವ ಇಂಧನ ಬೆಲೆಗಳ ಬಗ್ಗೆ ಪ್ರತಿಪಕ್ಷಗಳು ದೇಶದ ವಿವಿಧ ಭಾಗಗಳಲ್ಲಿ ಪ್ರತಿಭಟನೆ ನಡೆಸಿವೆ.