ನವದೆಹಲಿ:ಖಜಾನೆ ಮೊತ್ತ ನಿರೀಕ್ಷಿತ ಪ್ರಮಾಣದಲ್ಲಿ ಸಂಗ್ರಹಿಸುವ ಉದ್ದೇಶದಿಂದ 'ಎಲ್ಲ ಸಂಭಾವ್ಯ ಕ್ರಮಗಳನ್ನು ತೆಗೆದುಕೊಂಡು' ತೆರಿಗೆ ಪಡೆಯುವಂತೆ ಪ್ರಧಾನಿ ಮೋದಿ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಐಟಿ ಅಧಿಕಾರಿಗಳಿಗೆ ಸೂಚಿಸಿದ್ದಾರೆ ಎನ್ನಲಾಗಿದ್ದು, ಈ ಸೂಚನೆ ಹಿಂತೆಗೆದುಕೊಳ್ಳುವಂತೆ ಕೋರಿ ವಿವಿಧ ಚಾರ್ಟರ್ಡ್ ಅಕೌಂಟೆಂಟ್ (ಸಿಎ) ಸಂಸ್ಥೆಗಳು ಪತ್ರ ಬರೆದಿದ್ದಾರೆ.
'ಅಸಮಂಜಸ ಮತ್ತು ಕಠಿಣ ಕ್ರಮದಂತಹ ಒತ್ತಡ ತಂತ್ರಗಳು ತೆರಿಗೆ ಪಾವತಿದಾರರ ವಿನಾಶಕ್ಕೆ ಕಾರಣವಾಗಬಹುದು. ಇಂತಹ ನಿರ್ಧಾರ ತೆರಿಗೆ ಪಾವತಿ ಸ್ನೇಹಿ ಆಡಳಿತ ಉತ್ತೇಜಿಸುವ ಸರ್ಕಾರದ ಗುರಿಗೆ ಹಿನ್ನಡೆ ಆಗುತ್ತದೆ' ಎಂದು ಪತ್ರದಲ್ಲಿ ತಿಳಿಸಿದ್ದಾರೆ.
ಬಾಂಬೆ ಚಾರ್ಟರ್ಡ್ ಅಕೌಂಟೆಂಟ್ಸ್ ಸೊಸೈಟಿ, ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಅಹಮದಾಬಾದ್, ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಸೂರತ್, ಕರ್ನಾಟಕ ಸ್ಟೇಟ್ ಚಾರ್ಟರ್ಡ್ ಅಕೌಂಟೆಂಟ್ಸ್ ಅಸೋಸಿಯೇಷನ್ ಮತ್ತು ಲಕ್ನೋ ಚಾರ್ಟರ್ಡ್ ಅಕೌಂಟೆಂಟ್ಸ್ ಸೊಸೈಟಿ ಜಂಟಿಯಾಗಿ ಕಳುಹಿಸಿವೆ.
ಪತ್ರದ ಹಿಂಭಾಗದಲ್ಲಿ, 'ತೆರಿಗೆ ಪಾವತಿಸುವ ಸಮುದಾಯದ ಮೇಲೆ ಯಾವುದೇ ಕ್ರಮ ತೆಗೆದುಕೊಂಡು ತೆರಿಗೆ ಪಡೆಯುವಂತೆ ಸಿಬಿಡಿಟಿ, ಆದಾಯ ತೆರಿಗೆ ಹಾಗೂ ಕೆಳ ಹಂತದ ಅಧಿಕಾರಿಗಳಿಗೆ ಸೂಚಿಸಿದ್ದಿರಾ. ತೆರಿಗೆದಾರರ ಮೇಲೆ ಹೊರೆಯಾಗುತ್ತಿರುವ ಸೂಚನೆ ಹಿಂಪಡೆಯುವಂತೆ ಕೋರಿ ಗೌರವಾನ್ವಿತ ಪ್ರಧಾನಿ ಹಾಗೂ ಹಣಕಾಸು ಸಚಿವರಲ್ಲಿ ಮನವಿ ಮಾಡಿಕೊಳ್ಳುತ್ತೇವೆ' ಎಂದು ಬರೆದಿದ್ದಾರೆ.
ಆದಾಯ ತೆರಿಗೆ ಇಲಾಖೆಯು 2018-19ನೇ ಸಾಲಿನ ಆರ್ಥಿಕ ವರ್ಷದಲ್ಲಿ ₹ 12 ಲಕ್ಷ ಕೋಟಿ ನೇರ ತೆರಿಗೆ ಸಂಗ್ರಹಿಸುವ ಗುರಿ ಇರಿಸಿಕೊಂಡಿತು. ಸದ್ಯ ₹ 10.39 ಲಕ್ಷ ಕೋಟಿಯಷ್ಟು ಮಾತ್ರವೇ ಖಜಾನೆ ಸೇರಿದ್ದು, ಅಂದಾಜು ₹ 70, ಸಾವಿರ ಕೋಟಿಯಷ್ಟು ಕಡಿತವಾಗುವ ನಿರೀಕ್ಷೆ ಇದೆ. ಹೀಗಾಗಿ, ಅಧಿಕಾರಿಗಳ ಮೇಲೆ ಒತ್ತಡ ತಂದು ಆ ಮೊತ್ತವನ್ನು ಇಳಿಸುವತ್ತ ಹಣಕಾಸು ಸಚಿವಾಲಯ ನಿರ್ಧರಿಸಿದೆ.