ನವದೆಹಲಿ:ಕೋವಿಡ್ -19 ಸೋಂಕು ಹಬ್ಬಿದ ಬಳಿಕ ಲಾಕ್ಡೌನ್ ವಿಧಿಸಿ ಜನರ ಮಧ್ಯೆ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನೋಡಿಕೊಳ್ಳಲು 21 ದಿನಗಳ ಕಾಲ ಗೃಹ ದಿಗ್ಬಂಧನದಲ್ಲಿ ಇರಿಸಲಾಗಿದೆ. ಇದರಿಂದ ಆಮೆ ವೇಗದಲ್ಲಿ ಸಾಗುತ್ತಿದ್ದ ಟೆಲಿಮೆಡಿಸಿನ್ ಸೇವೆಗೆ ಅಪಾರ ಜನಪ್ರಿಯತೆ ಬಂದಿದೆ.
ದೂರಸಂಪರ್ಕ ತಂತ್ರಜ್ಞಾನದ ಮೂಲಕ ರೋಗಿ ಅಥವಾ ಸಂಬಂಧಿಕರು ಟಿಲಿಫೋನ್ ಕರೆ, ಎಸ್ಎಂಎಸ್ ಮತ್ತು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ವೈದ್ಯರೊಂದಿಗೆ ಸಂವಹನ ನಡೆಸಿ ಚಿಕಿತ್ಸಾ ಸಲಹೆ ಪಡೆಯಬಹುದಾಗಿದೆ.
ಜನರು ವೈದ್ಯರೊಂದಿಗೆ ಸಮಾಲೋಚನೆಗಾಗಿ ಪ್ರಾಕ್ಟೊ, ಡಾಕ್ಸ್ಆ್ಯಪ್ ಮತ್ತು ಎಂಫೈನ್‌ನಂತಹ ಅಪ್ಲಿಕೇಷನ್ ಮತ್ತು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳನ್ನು ಬಳಸಿಕೊಳ್ಳಬಹುದು. ಪ್ರತಿ ಸಮಾಲೋಚನೆಗೆ ಆರಂಭಿಕ ಬೆಲೆಯನ್ನು 199 ರೂ. ನಿಗದಿಪಡಿಸಿದೆ. ಸ್ಥಳೀಯ ವೈದ್ಯರೂ ಸಹ ಇವುಗಳ ಮುಖೇ ರೋಗಿಗಳೊಂದಿಗೆ ಸಂವಹನ ನಡೆಸಬಹುದು.
ಟೆಲಿಮೆಡಿಸಿನ್ ಸೇವೆ ಎಂದರೇನು?:ಟೆಲಿಮೆಡಿಸಿನ್ ಸೇವೆ ಇಚ್ಛಿಸುವ ರೋಗಿಗಳು ಸಂಬಂಧಪಟ್ಟ ವೈದ್ಯರ ವಾಟ್ಸ್ಆ್ಯಪ್ ನಂಬರ್‌ಗೆ ರೋಗ ಲಕ್ಷಣಗಳ ಮಾಹಿತಿ ಕಳುಹಿಸಬೇಕು. ತಮ್ಮ ಹೆಸರು, ವಯಸ್ಸು, ಲಿಂಗ, ತೂಕ, ಕಾಯಿಲೆಯ ವಿವರ ಹಾಗೂ ಈ ಹಿಂದೆ ಪಡೆದ ಔಷಧ ಬಗೆಯೂ ಹಂಚಿಕೊಳ್ಳಬೇಕು. ವೈದ್ಯರು, ರೋಗಿಯ ಪ್ರಾಥಮಿಕ ಮಾಹಿತಿ ಪರಿಶೀಲಿಸಿ ಅಗತ್ಯವಿದರೇ ಸಂಬಂಧ ಪಟ್ಟ ರೋಗಿಗೆ ಕರೆ ಮಾಡುತ್ತಾರೆ. ಇಲ್ಲವಾದರೇ ಯಾವ ಔಷಧ ಸೂಕ್ತವೆಂದು ತಮ್ಮ ನೋಂದಣಿ ಸಂಖ್ಯೆಯಿಂದ ಚಿಟಿಯಲ್ಲಿ ಬರೆದು ರೋಗಿಗೆ ಕಳುಹಿಸುತ್ತಾರೆ. ಈ ಔಷಧವನ್ನ ಮೆಡಿಕಲ್‌ನಲ್ಲಿ ಪಡೆಯಬಹುದು.
ಭಾರತದ ಕೆಲವು ಖಾಸಗಿ ಆರೋಗ್ಯ ಸೇವಾ ಕೇಂದ್ರಗಳಾದ ನಾರಾಯಣ ಹೃದಯಾಲಯ, ಅಪೊಲೊ ಟೆಲಿಮೆಡಿಸಿನ್ ಎಂಟರ್‌ಪ್ರೈಸಸ್, ಏಷ್ಯಾ ಹಾರ್ಟ್ ಫೌಂಡೇಷನ್, ಎಸ್ಕೋರ್ಟ್ಸ್ ಹಾರ್ಟ್ ಇನ್ಸ್ಟಿಟ್ಯೂಟ್, ಅರವಿಂದ್ ಐ ಕೇರ್ ಸೇರಿದಂತೆ ಇತರರು ಟೆಲಿಮೆಡಿಸಿನ್ ಸೇವೆ ನೀಡುತ್ತಿವೆ. ಸರ್ಕಾರಗಳು ಹಾಗೂ ನವಿನ ತಂತ್ರಜ್ಞಾನದ ಮಾರ್ಗದರ್ಶನ ನೀಡುವ ಇಸ್ರೊದಂತಹ ಸಂಸ್ಥೆಗಳು ಇದಕ್ಕೆ ಕೈಜೋಡಿಸಿವೆ.