ನವದೆಹಲಿ:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಉಜ್ವಲ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಭಾರತದ ಮಹಾಲೇಖಪಾಲರ (ಸಿಎಜಿ) ವರದಿಯಲ್ಲಿ ಬಹಿರಂಗವಾಗಿದೆ.
ಬಡ ಕುಟುಂಬವೊಂದು ನಿತ್ಯ 20 ಗ್ಯಾಸ್ ಸಿಲಿಂಡರ್ಗಳನ್ನು ಬಳಕೆ ಮಾಡಲು ಹೇಗೆ ಸಾಧ್ಯ? ಎಂಬ ಗಂಭೀರ ಪ್ರಶ್ನೆಯನ್ನು ಸಿಎಜಿಯು ತನ್ನ ಲೆಕ್ಕಪರಿಶೋಧನಾ ವರದಿಯಲ್ಲಿ ಎತ್ತಿದೆ. ದಿನವೊಂದರಲ್ಲಿ ಒಬ್ಬರೇ ಫಲಾನುಭವಿ ಅನೇಕ ಬಾರಿ ಸಿಲಿಂಡರ್ ಮರುತುಂಬಿಸಿಕೊಂಡಿರುವ ಲಕ್ಷಾಂತರ ಪ್ರಕರಣಗಳು ಬೆಳಕಿಗೆ ಬಂದಿವೆ!
ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ರಿಯಾಯಿತಿ ದರದಲ್ಲಿ ವಿತರಿಸಲಾಗುವ ಎಲ್ಪಿಜಿ ಸಿಲಿಂಡರ್ ಅನ್ನು ಒಬ್ಬರೇ ಫಲಾನುಭವಿ ಒಂದೇ ದಿನದಲ್ಲಿ 2ರಿಂದ 20 ಬಾರಿ ಪಡೆದಿರುವ ಸುಮಾರು 3.44 ಲಕ್ಷ ಪ್ರಕರಣಗಳು ಕಂಡು ಬಂದಿವೆ. ಗೃಹ ಬಳಕೆಗೆ ಉಪಯೋಗವಾಗಬೇಕಿದ್ದ ಸಿಲಿಂಡರ್ ವಾಣಿಜ್ಯ ಬಳಕೆಗಾಗಿ ನೀಡಿರುವ ಬಗ್ಗೆ ಸಿಎಜಿ ಅನುಮಾನ ವ್ಯಕ್ತಪಡಿಸಿದೆ.
ಬಿಪಿಎಲ್ ಕುಟುಂಬದ ಮಹಿಳೆಯರಿಗೆ ಉಚಿತವಾಗಿ ಎಲ್ಪಿಜಿ ಸಂಪರ್ಕ ಒದಗಿಸುವ ಪ್ರಧಾನ ಮಂತ್ರಿ ಉಜ್ವಲ ಯೋಜನೆಗೆ 2016ರ ಮೇ ತಿಂಗಳಲ್ಲಿ ಚಾಲನೆ ನೀಡಲಾಗಿತ್ತು. 2019ರ ಜೂನ್ ತಿಂಗಳಲ್ಲಿ 8 ಕೋಟಿ ಜನರಿಗೆ ಹೊಸ ಎಲ್ಪಿಜಿ ಸಂಪರ್ಕ ಕೊಡಿಸುವ ಮೂಲಕ ಯೋಜನೆಯು ದೊಡ್ಡ ಯಶಸ್ವಿಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿಕೊಂಡಿತ್ತು. ಈಗ ಯೋಜನೆಯಲ್ಲಿ ದುರ್ಬಳಕೆಯ ಗಂಭೀರ ಆರೋಪ ಕೇಳಿಬಂದಿದೆ.