ನವದೆಹಲಿ:ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ (ಪಿಎಂಎಫ್ಬಿವೈ) ಹೊಸ ರೂಪ ನೀಡುವ ಮತ್ತು ಪುನರ್ರಚಿಸಿದ ಹವಾಮಾನ ಆಧರಿಸಿದ ಬೆಳೆ ವಿಮಾ ಯೋಜನೆಗೆ (ಆರ್ಡಬ್ಲ್ಯುಬಿಸಿಐಎಸ್) ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ತೋಮರ್ ಹೇಳಿದ್ದಾರೆ.
ಸಚಿವ ಸಂಪುಟದ ಬಳಿಕ ಮಾತನಾಡಿದ ಅವರು, ರೈತರ ತಮ್ಮ ಬೆಳೆ ಸಾಲದ ಜೊತೆಗೆ ಪಡೆಯುವ ಬೆಳೆ ವಿಮೆ ಯೋಜನೆಯನ್ನು ಕೇಂದ್ರ ಸರ್ಕಾರ ಐಚ್ಛಿಕಗೊಳಿಸಿದೆ. ಪ್ರಸ್ತುತ ಬೆಳೆ ವಿಮೆ ಯೋಜನೆ ಜಾರಿಯಲ್ಲಿ ಮುಂದೆ ಬರಲಿರುವ ಸಮಸ್ಯೆಗಳನ್ನು ದಿಟ್ಟವಾಗಿ ಪರಿಹರಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದರು.
ಕೇಂದ್ರ ಸರ್ಕಾರವು ಈಗ ಜಾರಿಯಲ್ಲಿರುವ ಪಿಎಂಎಫ್ಬಿವೈ ಹಾಗೂ ಆರ್ಡಬ್ಲ್ಯುಬಿಸಿಐಎಸ್ ಯೋಜನೆಗಳಲ್ಲಿನ ಕೆಲ ನಿಯಮ ಹಾಗೂ ಪ್ರಸ್ತಾವನೆಗಳಲ್ಲಿ ಬದಲಾವಣೆ ಮಾಡಲಾಗಿದೆ. ಎಲ್ಲ ಬೇಸಾಯಗಾರರು ಈ ಯೋಜನೆಗಳ ಲಾಭಪಡೆಯುವುದನ್ನು ಐಚ್ಛಿಕಗೊಳಿಸಲಾಗಿದೆ ಎಂದು ವಿವರಿಸಿದರು.
ಪ್ರಸ್ತುತ ದೇಶದಲ್ಲಿ ಶೇ 58ರಷ್ಟು ರೈತರು ಬೆಲೆ ಸಾಲ ಪಡೆದಿದ್ದಾರೆ. ಶೇ 42ರಷ್ಟು ರೈತರು ಸಾಲ ಪಡೆದಿಲ್ಲ. ಬೆಳೆ ಸಾಲ ಯೋಜನೆ ಆಯ್ಕೆ ಮಾಡಿಕೊಳ್ಳುವ ರೈತರ ಸಂಖ್ಯೆಯು ತಕ್ಷಣದಲ್ಲಿ ಕ್ಷೀಣಿಸಲಿದೆ. ಕ್ರಮೇಣ ಸೇರ್ಪಡೆಯಾಗುವ ಸಂಖ್ಯೆಯು ಹೆಚ್ಚಾಗಲಿದೆ ಎಂದರು.
2016ರ ಫೆಬ್ರವರಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಗೆ ಚಾಲನೆ ನೀಡಿದರು. ಬೆಳೆ ಸಾಲ ಪಡೆದ ರೈತರು ಈ ಯೋಜನೆಯಡಿ ವಿಮೆ ಸೌಲಭ್ಯ ಪಡೆಯುವುದು ಕಡ್ಡಾಯವಾಗಿತ್ತು.