ನವದೆಹಲಿ:ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ 21ನೇ ಶತಮಾನದ ಹೊಸ ಶಿಕ್ಷಣ ನೀತಿಗೆ ಒಪ್ಪಿಗೆ ನೀಡಿದೆ.
ಕಳೆದ 34 ವರ್ಷಗಳಿಂದ ಶಿಕ್ಷಣ ನೀತಿಯಲ್ಲಿ ಯಾವುದೇ ಬದಲಾವಣೆಗಳಾಗಿರಲಿಲ್ಲ. ಈ ಶಿಕ್ಷಣ ನೀತಿಯನ್ನು ರಾಷ್ಟ್ರದ ಜನತೆಯ ಜೊತೆಗೆ ವಿಶ್ವದ ಶಿಕ್ಷಣ ತಜ್ಞರು ಸ್ವಾಗತಿಸುತ್ತಾರೆ ಎಂಬ ವಿಶ್ವಾಸವನ್ನು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ವ್ಯಕ್ತಪಡಿಸಿದರು.
ಸಚಿವ ಸಂಪುಟದ ಸಭೆ ಬಳಿಕ ಮಾತನಾಡಿದ ಅವರು, ರಾಷ್ಟ್ರೀಯ ಶಿಕ್ಷಣ ನೀತಿ-2020, ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಮುಖ ಸುಧಾರಣೆಗಳನ್ನು ತರಲಿದ್ದು, 2035ರ ವೇಳೆಗೆ ಶೇ 50ರಷ್ಟು ದಾಖಲಾತಿ ಗುರಿ ಹೊಂದಿದೆ ಎಂದರು.
ಶ್ರೇಣೀಕೃತ ಶೈಕ್ಷಣಿಕ, ಆಡಳಿತಾತ್ಮಕ ಮತ್ತು ಆರ್ಥಿಕ ಸ್ವಾಯತ್ತತೆ ಮತ್ತು ಎಲ್ಲಾ ಉನ್ನತ ಶಿಕ್ಷಣವನ್ನು ಒಂದೇ ನಿಯಂತ್ರಕ ವ್ಯವಸ್ಥೆಯಡಿ ತರಲಾಗುವುದು. ಪಾರದರ್ಶಕ ವ್ಯವಸ್ಥೆಯಡಿ ಶಿಕ್ಷಣ ಕ್ಷೇತ್ರ ಕಾರ್ಯನಿರ್ವಹಿಸುತ್ತವೆ ಎಂದು ಉನ್ನತ ಶಿಕ್ಷಣ ಇಲಾಖೆಯ ಕಾರ್ಯದರ್ಶಿ ಅಮಿತ್ ಖರೆ ಹೇಳಿದರು.
ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಪ್ರಸ್ತುತ ಒಟ್ಟು ಜಿಡಿಪಿಯ ಶೇ 4.4ರಷ್ಟು ವೆಚ್ಚವಾಗುತ್ತಿದೆ. ಆದರೆ, ನಾವು ಅದನ್ನು ಶೇ 6ಕ್ಕೇರಿಸಲು ಉದ್ದೇಶಿಸಿದ್ದೇವೆ ಎಂದರು.
ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಅಧಿಕಾರವಧಿಯಲ್ಲಿ ಹೊಸ ಶಿಕ್ಷಣ ನೀತಿ ರೂಪಿಸಲಾಗಿತ್ತು. ದೇಶದ ಶಿಕ್ಷಣ ಕ್ಷೇತ್ರದಲ್ಲಿ ಆಗಿರುವ ಬದಲಾವಣೆಗಳ ದೃಷ್ಟಿಯಿಂದ ಕೇಂದ್ರ ಸರ್ಕಾರವು ಹೊಸ ಶಿಕ್ಷಣ ನೀತಿ ರಚಿಸಿದೆ. ಇದರಿಂದಾಗಿ ಡಿಜಿಟಲ್ ಶಿಕ್ಷಣ ಮತ್ತು ನಾವೀನ್ಯತೆಯನ್ನು ಬದಲಾದ ಸಂದರ್ಭಗಳಲ್ಲಿ ಸೇರಿಸಿಕೊಳ್ಳಬಹುದಾಗಿದೆ.
ಪ್ರಾದೇಶಿಕ ಭಾಷೆಗಳಲ್ಲಿ ಇ-ಕೋರ್ಸ್ ಅಭಿವೃದ್ಧಿ:
ಇ-ಕೋರ್ಸ್‌ಗಳನ್ನು ಪ್ರಾದೇಶಿಕ ಭಾಷೆಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ವರ್ಚುವಲ್ ಲ್ಯಾಬ್‌ಗಳ ಜೊತೆಗೆ ರಾಷ್ಟ್ರೀಯ ಶೈಕ್ಷಣಿಕ ತಂತ್ರಜ್ಞಾನ ವೇದಿಕೆ (ಎನ್‌ಇಟಿಎಫ್) ರಚಿಸಲಾಗುತ್ತಿದೆ.
ಶಿಕ್ಷಣ ಯೋಜನೆ, ಬೋಧನೆ, ಕಲಿಕೆ, ಮೌಲ್ಯಮಾಪನ, ಶಿಕ್ಷಕರು, ಶಾಲೆ ಮತ್ತು ವಿದ್ಯಾರ್ಥಿಗಳ ತರಬೇತಿಯ ಭಾಗವಾಗಿ ಇ-ಟೆಕ್ ಪ್ರಾದೇಶಿಕ ಭಾಷೆಗಳಲ್ಲಿ ಲಭ್ಯವಿರುತ್ತದೆ. ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಲಭ್ಯವಿರುವ ಇ-ಕೋರ್ಸ್‌ಗಳು ಇನ್ನು ಮುಂದೆ ಕನ್ನಡ, ಒಡಿಯಾ, ಬಂಗಾಳಿ ಸೇರಿ 8 ಪ್ರಮುಖ ಭಾಷೆಗಳಲ್ಲಿ ದೊರೆಯಲಿದೆ.