ನವದೆಹಲಿ:2020ರ ಅಕ್ಟೋಬರ್‌ನಿಂದ ಆರಂಭವಾಗುವ ಮುಂದಿನ ಮಾರುಕಟ್ಟೆ ವರ್ಷದಲ್ಲಿ ಕಬ್ಬು ಬೆಳೆಗಾರರಿಗೆ ಪಾವತಿಸುವ ಕನಿಷ್ಠ ಬೆಲೆಯನ್ನು ಸಕ್ಕರೆ ಕಾರ್ಖಾನೆಗಳಿಗೆ ಕ್ವಿಂಟಲ್‌ಗೆ 10 ರೂ.ದಿಂದ 285 ರೂ.ಗೆ ಹೆಚ್ಚಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ.
2020-21ರ ಮಾರುಕಟ್ಟೆ ವರ್ಷಕ್ಕೆ (ಅಕ್ಟೋಬರ್-ಸೆಪ್ಟೆಂಬರ್) ಕಬ್ಬಿನ ನ್ಯಾಯಯುತ ಮತ್ತು ಸಂಭಾವನೆ ದರ (ಫೇರ್ ಆ್ಯಂಡ್ ರೆಮ್ಯುನರೇಟಿವ್ ಪ್ರೈಸ್: ಎಫ್‌ಆರ್‌ಪಿ) ಹೆಚ್ಚಿಸುವ ನಿರ್ಧಾರವನ್ನು ಆರ್ಥಿಕ ವ್ಯವಹಾರಗಳ ಕ್ಯಾಬಿನೆಟ್ ಸಮಿತಿ (ಸಿಸಿಇಎ) ಸಭೆಯಲ್ಲಿ ತೆಗೆದುಕೊಳ್ಳಲಾಗಿದೆ. ಇಂದು ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ದೊರೆತಿದೆ.
1 ಕೋಟಿ ಕಬ್ಬು ಬೆಳೆಗಾರರಿಗೆ ಸಂಭಾವನೆ ದರವನ್ನ ಪ್ರತಿ ಕ್ವಿಂಟಲ್‌ಗೆ 285 ರೂ. ನಂತೆ ನಿಗದಿಪಡಿಸಲಾಗಿದೆ. ಶೇ 10ರಷ್ಟು ಚೇತರಿಕೆ ದರ ಆಧರಿಸಿದೆ. ಸರ್ಕಾರವು ಎಥೆನಾಲ್ ಅನ್ನು ಉತ್ತಮ ಬೆಲೆಗೆ ತೆಗೆದುಕೊಳ್ಳುತ್ತದೆ. ಕಳೆದ ವರ್ಷ ಸರ್ಕಾರವು 190 ಕೋಟಿ ಲೀಟರ್ ಎಥೆನಾಲ್ ಅನ್ನು ಪ್ರತಿ ಲೀಟರ್ಗೆ 60 ರೂ. ಕೊಟ್ಟು ಖರೀದಿಸಿತ್ತು ಎಂದು ಕೇಂದ್ರ ಸಚಿವ ಜಾವಡೇಕರ್ ಮಾಹಿತಿ ನೀಡಿದರು.
ಕಬ್ಬಿನ ಎಫ್‌ಆರ್‌ಪಿಯನ್ನು ಕ್ವಿಂಟಲ್‌ಗೆ 10 ರೂ. ಹೆಚ್ಚಿಸುವ ಆಹಾರ ಸಚಿವಾಲಯದ ಪ್ರಸ್ತಾವವನ್ನು ಸಿಸಿಇಎ ಅಂಗೀಕರಿಸಿದೆ. ಇದು ಕೃಷಿ ವೆಚ್ಚ ಮತ್ತು ಬೆಲೆಗಳ ಆಯೋಗದ (ಸಿಎಸಿಪಿ) ಶಿಫಾರಸಿಗೆ ಅನುಗುಣವಾಗಿದೆ. ಕಬ್ಬು (ನಿಯಂತ್ರಣ) ಆದೇಶ, 1966ರ ಅಡಿ ಎಫ್‌ಆರ್‌ಪಿಯು ಸಕ್ಕರೆ ಕಾರ್ಖಾನೆಗಳು ಕಬ್ಬಿನ ರೈತರಿಗೆ ಪಾವತಿಸಬೇಕಾದ ಕನಿಷ್ಠ ಬೆಲೆಯಾಗಿದೆ.
ಕಬ್ಬು ಉತ್ಪಾದಿಸುವ ಪ್ರಮುಖ ರಾಜ್ಯಗಳಾದ ಉತ್ತರ ಪ್ರದೇಶ, ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ತಮ್ಮದೇ ಆದ ಕಬ್ಬಿನ ಬೆಲೆಯನ್ನು ‘ರಾಜ್ಯ ಸಲಹಾ ಬೆಲೆಗಳು’ (ಎಸ್‌ಎಪಿ) ಎಂದು ನಿಗದಿಪಡಿಸುತ್ತವೆ. ಅವುಗಳ ದರ ಕೇಂದ್ರದ ಎಫ್‌ಆರ್‌ಪಿಗಿಂತ ಹೆಚ್ಚಿರುತ್ತವೆ.