ನವದೆಹಲಿ: ಒಂದು ಕಾಲದಲ್ಲಿ ಲ್ಯಾಂಬ್ರೆಟ್ಟಾ ಮತ್ತು ವಿಜಯ್ ಸೂಪರ್ ಮುಂತಾದ ಪ್ರಸಿದ್ಧ ಸ್ಕೂಟರ್ಗಳನ್ನು ತಯಾರಿಸುತ್ತಿದ್ದ, ಸದ್ಯ ನಷ್ಟದಲ್ಲಿರುವ ಸರ್ಕಾರಿ ಸ್ವಾಮ್ಯದ ಸ್ಕೂಟರ್ಸ್ ಇಂಡಿಯಾ ಸಂಸ್ಥೆಯನ್ನು ಮುಚ್ಚುವ ಪ್ರಸ್ತಾಪಕ್ಕೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಲು ತಯಾರಾಗಿದೆ ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ವ್ಯವಹಾರಗಳ ಸಂಪುಟ ಸಮಿತಿ (ಸಿಸಿಇಎ) ಬುಧವಾರ ನಡೆದ ಸಭೆಯಲ್ಲಿ ಲಖ್ನೋ ಮೂಲದ ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಸ್ಥಗಿತಗೊಳಿಸಲು ಒಪ್ಪಿಗೆ ನೀಡಿದೆ ಎಂದು ತಿಳಿದು ಬಂದಿದೆ.
ಕಂಪನಿಯ ಪ್ರಸಿದ್ಧ ಬ್ರಾಂಡ್‌ಗಳಾದ ಲ್ಯಾಂಬ್ರೆಟ್ಟಾ, ವಿಜಯ್ ಸೂಪರ್, ವಿಕ್ರಮ್ ಮತ್ತು ಲ್ಯಾಂಬ್ರೊ ಉತ್ಪನ್ನಗಳ ಬ್ರಾಂಡ್ ನೇಮ್ಗಳನ್ನು ಪ್ರತ್ಯೇಕವಾಗಿ ಮಾರಾಟ ಮಾಡಲಾಗುವುದು. ವಿಕ್ರಮ್ ಬ್ರಾಂಡ್ ಅಡಿಯಲ್ಲಿ ಕಂಪನಿಯು ಹಲವು ರೀತಿಯ ತ್ರಿಚಕ್ರ ವಾಹನಗಳನ್ನು ಸಹ ಉತ್ಪಾದಿಸುತ್ತದೆ.
ಮುಚ್ಚುವಿಕೆಯ ಪ್ರಸ್ತಾಪಕ್ಕೆ ಸರ್ಕಾರ ಮುಂದಾಗಿರುವ ಜವಾಬ್ದಾರಿಯನ್ನು ಬೃಹತ್ ಕೈಗಾರಿಕಾ ಸಚಿವಾಲಯ ವಹಿಸಿಕೊಳ್ಳಲಿದೆ. ಕ್ಯಾಬಿನೆಟ್‌ಗೆ ಮಂಡಿಸಿದ ಪ್ರಸ್ತಾವಿತ ಯೋಜನೆಯ ಪ್ರಕಾರ, ಸ್ಕೂಟರ್ಸ್ ಇಂಡಿಯಾ ಲಿಮಿಟೆಡ್ ಅನ್ನು ಮುಚ್ಚಲು ಅಗತ್ಯವಿರುವ 65.12 ಕೋಟಿ ರೂ. ಕೇಂದ್ರ ಸರ್ಕಾರದಿಂದ ಬಡ್ಡಿಯೊಂದಿಗೆ ಸಾಲವಾಗಿ ಪಡೆಯಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಸಾಕಷ್ಟು ಹಣದ ಪ್ರಮಾಣ ಲಭ್ಯವಾದ ನಂತರ ಹೆಚ್ಚುವರಿ ಉದ್ಯೋಗಿಗಳಿಗೆ ಸ್ವಯಂಪ್ರೇರಿತ ನಿವೃತ್ತಿ ಯೋಜನೆ / ಸ್ವಯಂಪ್ರೇರಿತ ಬೇರ್ಪಡಿಕೆ ಯೋಜನೆ (ವಿಆರ್‌ಎಸ್ / ವಿಎಸ್ಎಸ್)ಯನ್ನು ಜಾರಿಗೊಳಿಸಲಾಗುವುದು. ಲಖ್ನೋ ಪ್ರಧಾನ ಕಚೇರಿಯಲ್ಲಿ ಸುಮಾರು 100 ಉದ್ಯೋಗಿಗಳಿದ್ದಾರೆ.