ಬೆಂಗಳೂರು: ಯುರೋಪಿಯನ್ ಒಕ್ಕೂಟದ ಮಾರುಕಟ್ಟೆಯನ್ನು ತೊರೆದ ಇಂಗ್ಲೆಂಡ್, ಭಾರತದ ಮಾಹಿತಿ ತಂತ್ರಜ್ಞಾನ ಮತ್ತು ಔಷಧೀಯ ಕಂಪನಿಗಳ ಮೇಲೆ ಯಾವುದೇ ವ್ಯತಿರಿಕ್ತ ಪರಿಣಾಮ ಬೀರುವುದಿಲ್ಲ. ಬ್ರೆಕ್ಸಿಟ್ ನಂತರದ ದಿನಗಳಲ್ಲಿ ಎಂದಿನಂತೆ ವ್ಯವಹಾರ ಸಾಗುತ್ತವೆ ಎಂದು ಉದ್ಯಮದ ಪರಿಣತರು ಅಭಿಪ್ರಾಯಪಟ್ಟಿದ್ದಾರೆ.
ಇಂಗ್ಲೆಂಡ್ ಈಗಾಗಲೇ ಭಾರತೀಯ ಟೆಕ್ಕಿಗಳಿಗೆ ಉತ್ತಮ ವೀಸಾ ಆಡಳಿತ ಹೊಂದಿದೆ. ವೀಸಾ ನೀತಿ ಮೇಲೆ ಯಾವುದೇ ವಿಧದ ಪರಿಣಾಮ ಬೀರುವುದಿಲ್ಲ ಎಂದು ಇನ್ಫೋಸಿಸ್ ಲಿಮಿಟೆಡ್‌ನ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವಿ.ಬಾಲಕೃಷ್ಣನ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೊದಲ ಬಾರಿಗೆ 11 ಲಕ್ಷ ಕೋಟಿ ದಾಟಿದ TCS ಮಾರುಕಟ್ಟೆ ಮೌಲ್ಯ: ರಿಲಯನ್ಸ್ಗೆ ಪೈಪೋಟಿ
ಯುರೋಪ್ ಕೂಡ ಬ್ರೆಕ್ಸಿಟ್ ನಂತರ ತೀವ್ರವಾಗಿ ಬದಲಾಗಲಿದೆ ಎಂದು ನಾವು ಭಾವಿಸುವುದಿಲ್ಲ. ಈ ಮೊದಲು ವೀಸಾದಲ್ಲಿ ಅವರು ಇಂಗ್ಲೆಂಡ್ ಮತ್ತು ಯುರೋಪಿನೊಂದಿಗೆ ಪ್ರತ್ಯೇಕವಾಗಿ ವ್ಯವಹರಿಸಬೇಕಾಗಿತ್ತು ಎಂದರು.
ಬಯೋಕಾನ್ ಲಿಮಿಟೆಡ್‌ನ ಕಾರ್ಯನಿರ್ವಾಹಕ ಅಧ್ಯಕ್ಷ ಕಿರಣ್ ಮಜುಂದಾರ್ ಶಾ ಮಾತನಾಡಿ, ಬ್ರಿಟನ್ ಮಾರುಕಟ್ಟೆಯಲ್ಲಿ ಭಾರತೀಯ ಔಷಧ ಪ್ರಮುಖ ಪಾತ್ರ ವಹಿಸಿದೆ. ಬ್ರೆಕ್ಸಿಟ್ ನಂತರದ ಭಾರತವು ಹಲವು ಪ್ರಮುಖ ಕ್ಷೇತ್ರಗಳಲ್ಲಿ ತನ್ನ ದ್ವಿಪಕ್ಷೀಯ ವ್ಯಾಪಾರ ಬಲಪಡಿಸಲು ಅವಕಾಶ ಹೊಂದಿದೆ ಎಂದು ನಾನು ನಂಬುತ್ತೇನೆ. ಅದರಲ್ಲಿ ಫಾರ್ಮಾ ಕೂಡ ಒಂದು ಎಂದರು.
ಇಂಗ್ಲೆಂಡ್ನ ಮೆಡಿಸಿನ್ಸ್ ಮತ್ತು ಹೆಲ್ತ್‌ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿ ಮತ್ತು ಭಾರತದ ಸೆಂಟ್ರಲ್ ಡ್ರಗ್ಸ್ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ ನಿಕಟ ಸಹಕಾರದ ಮೂಲಕ ಪರಸ್ಪರ ನಿಯಂತ್ರಕ ಮಾದರಿಯನ್ನು ನಿರ್ಮಿಸಲು ಬಲವಾದ ಸಹಭಾಗಿತ್ವ ಹೊಂದಿವೆ ಎಂದು ಹೇಳಿದರು.