ಕರ್ನಾಟಕ

karnataka

ETV Bharat / business

ಬಡ ಜನರ ಕೈಗೆ ಬಜೆಟ್​ ಹಣ ಕೊಟ್ಟು ನೋಡಿ, ಆಗ ಆರ್ಥಿಕತೆ ರೂಫಿಗೇರುತ್ತೆ..! - 2020ರ ಬಜೆಟ್

ಈ ಹಿಂದಿನ ಬಜೆಟ್​​ನಲ್ಲಿ ಕಡು ಬಡವರು, ರೈತರು, ಅಸಂಘಟಿತ ಕಾರ್ಮಿಕರು ಮತ್ತು ಕೆಳ ವರ್ಗದವರನ್ನು ಕೇಂದ್ರೀಕರಿಸಿದ್ದರೂ ಇನ್ನೂ ಹೆಚ್ಚಿನ ಹಣವನ್ನು ಸಾಮಾನ್ಯ ಜನರ ಕೈಗೆ ನೀಡಬೇಕು ಎಂಬ ದೊಡ್ಡಮಟ್ಟದ ಕೂಗು ಕೇಳಿಬರುತ್ತಿದೆ.

Budget
ಬಜೆಟ್​

By

Published : Jan 29, 2020, 12:52 AM IST

ನವದೆಹಲಿ:ದೇಶದ ಆರ್ಥಿಕತೆಯು ಮಂದಗತಿಯಲ್ಲಿ ಇರುವಾಗ ಫೆಬ್ರವರಿ 1ರಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಲಿರುವ 2020ನೇ ಸಾಲಿನ ಬಜೆಟ್​​ನತ್ತ ಎಲ್ಲರ ದೃಷ್ಟಿ ನೆಟ್ಟಿದೆ.

ಈ ಹಿಂದಿನ ಬಜೆಟ್​​ನಲ್ಲಿ ಕಡುಬಡವರು, ರೈತರು, ಅಸಂಘಟಿತ ಕಾರ್ಮಿಕರು ಮತ್ತು ಕೆಳ ವರ್ಗದವರನ್ನು ಕೇಂದ್ರೀಕರಿಸಿದ್ದರೂ ಇನ್ನೂ ಹೆಚ್ಚಿನ ಹಣವನ್ನು ಸಾಮಾನ್ಯ ಜನರ ಕೈಗೆ ನೀಡಬೇಕು ಎಂಬ ದೊಡ್ಡಮಟ್ಟದ ಕೂಗು ಕೇಳಿಬರುತ್ತಿದೆ.

ಆದಾಯ ತೆರಿಗೆ ದರಗಳ ಕಡಿತ, ಉದ್ಯೋಗ ಸೃಷ್ಟಿ, ದ್ರವ್ಯತೆ ಪರಿಸ್ಥಿತಿ ಸುಧಾರಣೆಯ ಮೂಲಕ ಇದನ್ನು ಸಾಧಿಸಬಹುದಾಗಿದೆ. ಸೀತಾರಾಮನ್ ಅವರು ಒಂದೆರಡು ತಿಂಗಳ ಹಿಂದೆಯಷ್ಟೇ ಕಾರ್ಪೊರೇಟ್ ತೆರಿಗೆ ದರ ಕಡಿತಗೊಳಿಸಿದ್ದರು. ಕೇಂದ್ರದ ಇಂತಹ ಉತ್ತೇಜನಕರ ನಡೆ ಸಾಮಾನ್ಯ ವ್ಯಕ್ತಿಗೆ ತನಗೇನಾದರೂ ಸಿಗಬಹುದಾ ಎಂಬ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

ನಮ್ಮದು 130 ಕೋಟಿ ಜನಸಂಖ್ಯೆ ಹೊಂದಿರುವ ದೇಶ. ಆದರೆ, ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ಕೇವಲ 5.65 ಕೋಟಿ ಮಾತ್ರ. ಇದರ ಜೊತೆಗೆ ಹಣಕಾಸು ಸಚಿವರು ವೈಯಕ್ತಿಕ ಆದಾಯ ತೆರಿಗೆ ಸ್ಲ್ಯಾಬ್ ದರ ಸಡಿಲಗೊಳಿಸಬೇಕೆಂದು ಎಲ್ಲರೂ ನಿರೀಕ್ಷಿಸುತ್ತಾರೆ.

ಪ್ರಸ್ತುತ, 5 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿಗಳಿಗೆ ಯಾವುದೇ ತೆರಿಗೆ ಇಲ್ಲ (ರಿಯಾಯಿತಿ ಪರಿಗಣಿಸಿದ ಬಳಿಕ). ಮೂಲ ವಿನಾಯಿತಿ ಮಿತಿಯನ್ನು 2.5 ಲಕ್ಷ ರೂ.ಗಳಿಂದ 5 ಲಕ್ಷ ರೂ.ಗೆ ಹೆಚ್ಚಿಸಿಲ್ಲ.

ಆದಾಯ ತೆರಿಗೆ ಇಲಾಖೆಯ ಪ್ರಕಾರ, 97 ಲಕ್ಷಕ್ಕೂ ಹೆಚ್ಚು ವೈಯಕ್ತಿಕ ತೆರಿಗೆದಾರರು 5 ಲಕ್ಷದಿಂದ 10 ಲಕ್ಷ ರೂ.ಗಳವರೆಗೆ ಆದಾಯವನ್ನು ತೋರಿಸಿದ್ದಾರೆ. ಈ ತೆರಿಗೆದಾರರಿಂದ ಸಂಗ್ರಹಿಸಿದ ಆದಾಯ 45,000 ಕೋಟಿ ರೂ.ನಷ್ಟಿದೆ. ಸಂಬಳ ಪಡೆಯುವವರೇ ತೆರಿಗೆ ಪಾವತಿಯಲ್ಲಿ ಸಿಂಹಪಾಲು ಹೊಂದಿದ್ದಾರೆ. ಆದರಿಂದಲೇ ಹೆಚ್ಚಿನ ತೆರಿಗೆ ವಿನಾಯಿತಿ ನಿರೀಕ್ಷಿಸುತ್ತಿದಾರೆ. ಸರ್ಕಾರವು ಆದಾಯ ತೆರಿಗೆ ಕಡಿತಗೊಳಿಸಿದರೆ ಗ್ರಾಹಕರ ಹೆಚ್ಚಿನ ಹಣದ ಖರ್ಚಿಗೆ ಮತ್ತು ಬೇಡಿಕೆ ಹೆಚ್ಚಳಕ್ಕೆ ನೆರವಾಗಬಲ್ಲದು ಎಂಬ ವಾದವಿದೆ.

₹ 10 ಲಕ್ಷ ಅಥವಾ ಅದಕ್ಕಿಂತ ಹೆಚ್ಚಿನ ಆದಾಯ ಹೊಂದಿರುವ ವ್ಯಕ್ತಿಗಳ ಮೇಲೆ ಗರಿಷ್ಠ ತೆರಿಗೆ ದರ ಶೇ 30ರಷ್ಟು ವಿಧಿಸಲಾಗುತ್ತದೆ. ಗರಿಷ್ಠ ದರಕ್ಕೆ ಅನ್ವಯಿಸುವ ಆದಾಯ ಮಟ್ಟವನ್ನು ದೃಷ್ಟಿಯಲ್ಲಿ ಇರಿಸಿಕೊಂಡು ಸೀತಾರಾಮನ್ ಅವರು ನಿರ್ಧಾರ ತೆಗೆದುಕೊಂಡರೇ ಅದು ಗ್ರಾಹಕ ಮಾರುಕಟ್ಟೆಯನ್ನು ವಿಸ್ತರಿಸಲು ಪ್ರೇರಣೆ ಆಗುತ್ತದೆ.

ನೇರ ತೆರಿಗೆ ಸಂಹಿತೆಯ ಕಾರ್ಯಪಡೆಯ ಸಲಹೆಯೆಂದರೆ, 20 ಲಕ್ಷ ರೂ.ಗಿಂತ ಅಧಿಕ ಆದಾಯ ಇರುವವರಿಗೆ ಶೇ 30ರಷ್ಟು ತೆರಿಗೆ. ಪ್ರಸ್ತುತ 10 ಲಕ್ಷ ರೂ. ಇರುವವರೆಗೆ ಇದು ಬೇಡ. ಶೇ 20ರಷ್ಟು ತೆರಿಗೆಯನ್ನು ₹ 10ರಿಂದ ₹ 20 ಲಕ್ಷದವರಿಗೆ ಮತ್ತು ಶೇ 10ರಷ್ಟು ತೆರಿಗೆ ₹ 2.5 ಲಕ್ಷದಿಂದ ₹ 10 ಲಕ್ಷ ನಡುವೆ ಇರುವವರಿಗೆ ನಿಗದಿಪಡಿಸಬೇಕು ಎಂದಿದೆ.

ಸ್ವಯಂ ಆಕ್ರಮಿತ ಆಸ್ತಿಯ ವಸತಿ ಸಾಲದ ಬಡ್ಡಿ (5 ಕಂತುಗಳಲ್ಲಿನ ನಿರ್ಮಾಣ ಪೂರ್ವ ಬಡ್ಡಿ ಸೇರಿ) ಕಡಿತ ₹ 2 ಲಕ್ಷ. 2019-20ನೇ ಹಣಕಾಸು ವರ್ಷದಲ್ಲಿ ಪರಿಚಯಿಸಲಾದ ಸೆಕ್ಷನ್ 80 ಇಇಎ, ಸ್ಟಾಂಪ್ ಡ್ಯೂಟಿ ಮೌಲ್ಯದ ₹ 45 ಲಕ್ಷ ಕಡಿತ, ಗೃಹ ಸಾಲ ಬಡ್ಡಿಗೆ 2 ಲಕ್ಷ ಕಡಿತವಿದೆ.

ಅನೇಕ ನಗರಗಳಲ್ಲಿ ರಿಯಲ್ ಎಸ್ಟೇಟ್ ದರಗಳು ಹೆಚ್ಚಿದೆ. ಆದರಿಂದ, ಗೃಹ ಮೌಲ್ಯದ ಮೇಲೆ ಯಾವುದೇ ವಿಧದ ಮಿತಿಯನ್ನು ತೆಗೆಯಬೇಕು. ವಸತಿ ದರ ಮತ್ತು ಗಾತ್ರವನ್ನು ಲೆಕ್ಕಿಸದೆ ಎಲ್ಲಾ ತೆರಿಗೆ ಪಾವತಿದಾರರಿಗೆ ಅವರ ಮೊದಲ ವಸತಿ ಖರೀದಿಗೆ ಹೆಚ್ಚಿನ ಕಡಿತ ವಿಸ್ತರಿಸುವಂತಾಗಬೇಕು. ಇದು ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ಅಗತ್ಯವಾದ ಉತ್ತೇಜನ ನೀಡುತ್ತದೆ. ಖರೀದಿದಾರರಿಗೆ ಮುಕ್ತ ಆಯ್ಕೆಯ ಪರದೆ ಸಿಗುತ್ತದೆ.

ವಸತಿ ಉಳಿತಾಯಕ್ಕಾಗಿ ಸೆಕ್ಷನ್ 80ಸಿ ಅಡಿಯಲ್ಲಿನ ಕಡಿತವನ್ನು ವಾರ್ಷಿಕ 1,50,000 ರೂ.ಗೆ ಸೀಮಿತಗೊಳಿಸಲಾಗಿದೆ. ಜೀವನ ನಿರ್ವಹಣೆಯ ವೆಚ್ಚ ಏರಿಕೆಯಾಗಿದ್ದರಿಂದ ಸರ್ಕಾರ ತನ್ನ ಮಿತಿಯನ್ನು ಹೆಚ್ಚಿಸಬೇಕು. ಮಕ್ಕಳ ಬೋಧನಾ ಶುಲ್ಕ, ಜೀವ ವಿಮೆಯ ಪ್ರೀಮಿಯಂ ಮತ್ತು ವಸತಿ ಸಾಲದಂತಹ ಪ್ರಮುಖ ಪಾವತಿಗಳ ವೆಚ್ಚಗಳನ್ನು ಪ್ರತ್ಯೇಕ ಕಡಿತಗಳಿಗೆ ಅನುಮತಿಸಬೇಕು. ಎನ್‌ಪಿಎಸ್‌ಗೆ ವ್ಯಕ್ತಿ ನೀಡಿದ ಕೊಡಿಗೆಯನ್ನು ಪರಿಗಣಿಸಿ 50,000 ರೂ. ಹೆಚ್ಚುವರಿ ಕಡಿತವನ್ನು ಏರಿಕೆಮಾಡಬೇಕು ಎಂಬ ಕೂಗು ಸಹ ಇದೆ.

ಯಾವುದೇ ಇಂಡೆಕ್ಸ್​ ಪ್ರಯೋಜನವನ್ನು ಅನುಮತಿಸದೆ ಪಟ್ಟಿಮಾಡಿದ ಈಕ್ವಿಟಿ ಷೇರುಗಳನ್ನು 1 ಲಕ್ಷ ರೂ.ಗಿಂತ ಹೆಚ್ಚಿರುವ ಶೇ 10ರಷ್ಟು ವರ್ಗಾವಣೆಯಿಂದ ಬರುವ ಲಾಭಗಳ ಮೇಲೆ ದೀರ್ಘಾವಧಿಯ ಬಂಡವಾಳ ಲಾಭದ ತೆರಿಗೆಯನ್ನು ಮರುಪರಿಶೀಲಿಸುವ ಬೇಡಿಕೆಯೂ ಕೇಂದ್ರದ ಮುಂದಿದೆ. 1 ಲಕ್ಷ ರೂ. ಮಿತಿ ತುಂಬಾ ಕಡಿಮೆಯಾಗಿದೆ. ಅನೇಕ ವ್ಯಕ್ತಿಗಳು ಹಲವು ವರ್ಷಗಳಿಂದ ಈಕ್ವಿಟಿ ಮ್ಯೂಚುಯಲ್ ಫಂಡ್ ಹೂಡಿಕೆಗಳನ್ನು ಹೊಂದಿದ್ದಾರೆ.

ಒಟ್ಟಾರೆಯಾಗಿ ದೈನಂದಿನ ಬಳಕೆಯ ಸರಕುಗಳ ಬೆಲೆಗಳು ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿವೆ. ಅವುಗಳನ್ನು ಕೈಗೆಟುಕುವಂತೆ ಮಾಡಲು ದರವನ್ನು ಕಡಿಮೆ ಮಾಡಬೇಕು. ಆರ್ಥಿಕತೆಯಲ್ಲಿ ಅನುಭೋಗದ ಪ್ರವೃತ್ತಿಯನ್ನು ಹೆಚ್ಚಿಸಲು ಮತ್ತು ಬೇಡಿಕೆಯ ಕುಸಿತವನ್ನು ಪರಿಶೀಲಿಸಿ ಆಯ್ದ ಉತ್ಪನ್ನಗಳ ಮೇಲಿನ ಜಿಎಸ್​ಟಿ ದರಗಳನ್ನು ತಗ್ಗಿಸಬಹುದು ಎಂಬ ನಿರೀಕ್ಷೆಯಿದೆ.

-ಹಿರಿಯ ಪತ್ರಕರ್ತ ಶೇಖರ್ ಅಯ್ಯರ್

ABOUT THE AUTHOR

...view details