ನವದೆಹಲಿ:ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಇದೇ ಶನಿವಾರ ತಮ್ಮ ಎರಡನೇ ಬಜೆಟ್ ಮಂಡಿಸಲಿದ್ದಾರೆ. ಇತ್ತೀಚಿನ ಅಧಿಕೃತ ಮಾಹಿತಿಯ ಪ್ರಕಾರ, ಪ್ರಸಕ್ತ ಹಣಕಾಸು ವರ್ಷದ ಮೊದಲ 8 ತಿಂಗಳಲ್ಲಿ (ಏಪ್ರಿಲ್- ನವೆಂಬರ್) ಕೇಂದ್ರದ ನಿವ್ವಳ ತೆರಿಗೆ ಸಂಗ್ರಹ ಕೇವಲ 7.5 ಲಕ್ಷ ಕೋಟಿ ರೂ.ಯಷ್ಟಿದೆ. ಒಟ್ಟಾರೆ ಸಂಗ್ರಹದ 16.5 ಲಕ್ಷ ಕೋಟಿ ರೂ. ಗುರಿಯಲ್ಲಿ ಶೇ 45.5ರಷ್ಟು ಮಾತ್ರ ಸಾಧಿಸಲಾಗಿದೆ. ಇಂದು ನಿರ್ಮಲಾ ಬಜೆಟ್ಗೆ ಒಂದು ರೀತಿಯಲ್ಲಿ 'ಮಾಡು ಇಲ್ಲವೇ ಮಡಿ' ಎಂಬಂತಿದೆ.
ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಮಂತ್ರಿ ಸ್ಥಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ನಿರ್ಮಲಾ ಸೀತಾರಾಮನ್ ಅವರನ್ನು ಆಯ್ಕೆ ಮಾಡಿದರು. ಮಂದಗತಿಯಲ್ಲಿದ್ದ ದೇಶದ ಆರ್ಥಿಕತೆಯನ್ನು ಮೇಲೆತ್ತುವ ಜವಾಬ್ದಾರಿಯನ್ನು ಸಹ ಸೀತಾರಾಮನ್ ಅವರೇ ಹೊರಬೇಕಾಯಿತು.
2018-19ರ ಕೊನೆಯ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆ ಶೇ 5.8ಕ್ಕೆ ಇಳಿದಿತ್ತು. 2019-20ರ ಮೊದಲ ತ್ರೈಮಾಸಿಕದಲ್ಲಿ (ಏಪ್ರಿಲ್-ಜುಲೈ) ಅದು ಕೇವಲ ಶೇ 5ರಷ್ಟಕ್ಕೆ ಬಂದು ನಿಂತಿತ್ತು. ಎರಡನೇ ತ್ರೈಮಾಸಿಕದಲ್ಲಿ ( ಜುಲೈ-ಸೆಪ್ಟೆಂಬರ್) ಶೇ 4.5ಕ್ಕೆಇಳಿದಿದ್ದು, 2012-13ರ ಬಳಿಕ ಕನಿಷ್ಠ ಮಟ್ಟಕ್ಕೆ ತಲುಪಿದಂತಾಗಿದೆ. ನಿರ್ಮಲಾ ಸೀತಾರಾಮನ್ ಅವರು 2019ರ ಜುಲೈನಲ್ಲಿ ಮಂಡಿಸಿದ ಮೊದಲ ಬಜೆಟ್‌ಗೂ ಈ ಕುಸಿತದ ಪ್ರಭಾವ ಹೊರತಾಗಿರಲಿಲ್ಲ.
ಈ ಸಮಯದಲ್ಲಿ ಕೇಂದ್ರ ಸರ್ಕಾರಕ್ಕೆ ದೊಡ್ಡ ಸವಾಲು ಎಂದರೆ ಆದಾಯ ಸಂಗ್ರಹ. ಬೆಳವಣಿಗೆಯ ಮಂದಗತಿಯೊಂದಿಗೆ ಆದಾಯ ಸಂಗ್ರಹವೂ ಕ್ಷೀಣಿಸಿದೆ ಎಂದು ಫಿಚ್ ರೇಟಿಂಗ್ ಏಜೆನ್ಸಿಯ ಪ್ರಧಾನ ಅರ್ಥಶಾಸ್ತ್ರಜ್ಞ ಸುನಿಲ್ ಸಿನ್ಹಾ ಹೇಳಿದ್ದಾರೆ.
ಮಹಾಲೇಖಪಾಲರ ಪರಿಶೋಧಕ (ಸಿಜಿಎ) ವರದಿಯಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ, ಈ ಹಣಕಾಸು ವರ್ಷದಲ್ಲಿ ಕಾರ್ಪೊರೇಟ್ ತೆರಿಗೆಯ ಸಂಗ್ರಹವು ಕಳೆದ ಹಣಕಾಸು ವರ್ಷದ ಮೊದಲ 8 ತಿಂಗಳ ಸಂಗ್ರಹಣೆಗೆ ಹೋಲಿಸಿದರೆ 2,652 ಕೋಟಿ ರೂ. ಕಡಿತವಾಗಿದೆ. 2019ರ ಏಪ್ರಿಲ್‌ನಿಂದ ನವೆಂಬರ್ ನಡುವೆ 2,88,602 ರೂ. ಸ್ವೀಕರಿಸಿದ್ದರೇ ಕಳೆದ ವರ್ಷ ಇದೇ ಅವಧಿಯಲ್ಲಿ 2,91,254 ಕೋಟಿ ರೂ. ಹರಿದು ಬಂದಿತ್ತು.
ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಕಾರ್ಪೊರೇಟ್‌ಗಳ ಮೇಲಿನ ತೆರಿಗೆ ದರವನ್ನು ಶೇ 35ರಿಂದ 25ಕ್ಕೆ ಇಳಿಸಿದ್ದರು. ಈ ಎಲ್ಲ ವಿನಾಯಿತಿಗಳನ್ನು ತ್ಯಜಿಸಲು ಸಿದ್ಧವಿರುವ ಕಂಪನಿಗಳಿಗೆ ಶೇ 22ರಷ್ಟು ತೆರಿಗೆ ದರ ಘೋಷಿಸಿದ್ದರು. ಇದರ ಜತೆಗೆ ಹೊಸದಾಗಿ ಉತ್ಪಾದನಾ ಘಟಕ ಸ್ಥಾಪಿಸುವ ಕಂಪನಿಗಳಿಗೆ ಶೇ 15 ತೆರಿಗೆ ವಿಧಿಸುವುದಾಗಿ ಹೇಳಿದ್ದರು.
ಕಾರ್ಪೊರೇಟ್ ತೆರಿಗೆ ಸರ್ಕಾರದ ಒಟ್ಟಾರೆ ನೇರ ತೆರಿಗೆಯಲ್ಲಿ ಸಿಂಹ ಪಾಲು ಹೊಂದಿದೆ. 2020ರ ಹಣಕಾಸಿನ ವರ್ಷದ ಮೂರನೇ ತ್ರೈಮಾಸಿಕದಲ್ಲಿ ಆದಾಯ ಸಂಗ್ರಹಕ್ಕೆ ಬಲವಾದ ಪೆಟ್ಟನ್ನ ಕಾರ್ಪೊರೇಟ್ ತೆರಿಗೆ ನೀಡಿದೆ. ತತ್ಪರಿಣಾಮ ಜನವರಿ ತಿಂಗಳಲ್ಲಿಯೂ ಸಂಗ್ರಹವು ಇಳಿಕೆಯಾಗಿದೆ. ಈ ವರ್ಷ ಏಪ್ರಿಲ್ ಮತ್ತು ಜನವರಿ 15ರ ನಡುವೆ ಕಾರ್ಪೊರೇಟ್ ತೆರಿಗೆ 3.87 ಲಕ್ಷ ಕೋಟಿ ರೂ., ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವು 3.29 ಲಕ್ಷ ಕೋಟಿ ರೂ. ಆಗಿತ್ತು. ಭದ್ರತಾ ವ್ಯವಹಾರ ತೆರಿಗೆಯ (ಎಸ್‌ಟಿಟಿ) ಒಟ್ಟು ಸಂಗ್ರಹವು 9,030 ಕೋಟಿ ರೂ. ಆಗಿದ್ದು, 887 ಕೋಟಿ ರೂ.ಗಳು ಈಕ್ವಲೈಸೇಶನ್ ಮೂಲಕ ಬಂದಿದೆ.
ಮುಂದಿನ ಎರಡು ತಿಂಗಳಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹದ ಮೇಲೆ ಇನ್ನಷ್ಟು ನಕಾರಾತ್ಮಕ ಪರಿಣಾಮ ಬೀರಲಿವೆ ಎಂಬುದು ಈಗಾಗಲೇ ಗೋಚರಿಸುತ್ತಿವೆ. 2019ರ ಅಕ್ಟೋಬರ್ನಲ್ಲಿ ಕಾರ್ಪೊರೇಟ್ ತೆರಿಗೆ ಸಂಗ್ರಹವು 23,429 ಕೋಟಿ ರೂ.ಯಷ್ಟಿತ್ತು. ವರ್ಷದ ಹಿಂದೆ ಇದೇ ತಿಂಗಳಲ್ಲಿ 26,648 ಕೋಟಿ ರೂ.ಗಳಷ್ಟು ಸಂಗ್ರಹವಾಗಿತ್ತು. ನವೆಂಬರ್ನಲ್ಲಿ ಕೇವಲ 15.846 ಕೋಟಿ ರೂ. ಬಂದಿದ್ದರೇ 2018ರ ಇದೇ ತಿಂಗಳಲ್ಲಿ 20,864 ಕೋಟಿ ರೂ. ಸಂಗ್ರಹವಾಗಿತ್ತು. ಈ ಎಲ್ಲ ಅಂಕಿ - ಅಂಶಗಳು ಕುಸಿತದ ತೀಕ್ಷ್ಣತೆಯನ್ನು ತೋರ್ಪಡಿಸುತ್ತವೆ.