ನವದೆಹಲಿ: ಮುಂಬರಲಿರುವ ಬಜೆಟ್‌ನಲ್ಲಿ ಬೂದು ಮಾರುಕಟ್ಟೆಯ ಛಾಯೆ ನಿಗ್ರಹಿಸಲು ಮೊಬೈಲ್ ಫೋನ್‌ಗಳ ಆಮದು ಸುಂಕ ಕಡಿಮೆ ಮಾಡುವಂತೆ ಭಾರತದ ಸೆಲ್ಯುಲಾರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೋಸಿಯೇಷನ್ (ಐಸಿಇಎ) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.
ಇತ್ತೀಚೆಗೆ ಕಂದಾಯ ಇಲಾಖೆಗೆ ನೀಡಿದ ಪ್ರಾತಿನಿಧ್ಯದಲ್ಲಿ ಆಮದು ಸುಂಕದಲ್ಲಿ ಶೇ 20ರಷ್ಟು ಕಡಿತ ಅಥವಾ ಪ್ರತಿ ಮೊಬೈಲ್‌ಗೆ 4,000 ರೂ. ಇಳಿಕೆ ಈ ಎರಡಲ್ಲಿ ಯಾವುದರೂ ಒಂದನ್ನು ಅನುಷ್ಠಾನಕ್ಕೆ ತರುವಂತೆ ಐಸಿಇಎ ಆಗ್ರಹಿಸಿದೆ. ಪಿಎಲ್ಐ ಯೋಜನೆಯ ಹಿಂಭಾಗದಲ್ಲಿ ಜಾಗತಿಕ ಸ್ಪರ್ಧೆ ಎದುರಿಸಲು ಬಲಿಷ್ಠವಾದ ದೇಶೀಯ ಉತ್ಪಾದನೆ ಮತ್ತು ಉದ್ಯಮ ಸಿದ್ಧತೆಯ ದೃಷ್ಟಿಯಿಂದ ಇದನ್ನು ಪರಿಗಣಿಸುವಂತೆ ಮನವರಿಕೆ ಮಾಡಿದೆ.
ಭಾರತವು ಹಲವು ದೇಶಗಳಿಗೆ ಲಕ್ಷಾಂತರ ಫೋನ್‌ಗಳನ್ನು ರಫ್ತು ಮಾಡುತ್ತಿರುವ ಸಮಯದಲ್ಲಿ, ಹೆಚ್ಚಿನ ಆಮದು ಸುಂಕದ ಗೋಡೆ ಕಟ್ಟುವುದು ಅರ್ಥವಿಲ್ಲದ ತರ್ಕವಾಗಿದೆ ಎಂದು ಉದ್ಯಮದ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಒಂದು ಅಂದಾಜಿನ ಪ್ರಕಾರ, ಭಾರತವು 2018-19ರಲ್ಲಿ 3.8 ಶತಕೋಟಿ ಡಾಲರ್ ಮೌಲ್ಯದ ಮೊಬೈಲ್ ಫೋನ್ ರಫ್ತು ಮಾಡಿದೆ. ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಮೊಬೈಲ್ ಫೋನ್ ರಫ್ತುದಾರರಲ್ಲಿ ಭಾರತ ಅಗ್ರಸ್ಥಾನದಲ್ಲಿದೆ. ಆತ್ಮನಿರ್ಭರ ಭಾರತದ ನಿಮಿತ್ತ ಇತ್ತೀಚೆಗೆ ಘೋಷಿಸಲಾದ ಪ್ರೊಡಕ್ಷನ್ ಲಿಂಕ್ಡ್ ಇನ್ಸೆಂಟಿವ್ (ಪಿಎಲ್ಐ) ಉತ್ತಮ ಫಲಿತಾಂಶ ನೀಡುತ್ತಿದೆ.
ಇದನ್ನೂ ಓದಿ: ಫೋರ್ಡ್- ಮಹೀಂದ್ರಾ ಜಂಟಿ ಸಹಭಾಗಿತ್ವ ಒಪ್ಪಂದಕ್ಕೆ ಇತಿಶ್ರೀ!
ಉತ್ಪಾದನಾ - ಸಂಬಂಧಿತ ಪ್ರೋತ್ಸಾಹಕ ಯೋಜನೆ (ಪಿಎಲ್ಐ) ಅನ್ನು ಏಪ್ರಿಲ್ 2020ರಲ್ಲಿ ಪ್ರಾರಂಭಿಸಲಾಯಿತು. ಈಗ ಹಲವು ದೊಡ್ಡ ಕಂಪನಿಗಳು ಈ ಯೋಜನೆಗೆ ಸೇರಿಕೊಂಡಿವೆ. ಮುಂಬರುವ 5 ವರ್ಷಗಳಲ್ಲಿ 10.50 ಲಕ್ಷ ಕೋಟಿ ರೂ. ಮೌಲ್ಯದ ಫೋನ್ ತಯಾರಿಸಲು ಯೋಜಿಸಲಾಗಿದೆ. 9 ಲಕ್ಷ ನೇರ ಮತ್ತು ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತದೆ" ಎಂದು ಐಟಿ ಮತ್ತು ಟೆಲಿಕಾಂ ಸಚಿವ ರವಿಶಂಕರ್ ಪ್ರಸಾದ್ ಇತ್ತೀಚೆಗೆ ಟ್ವೀಟ್ ಮಾಡಿದ್ದರು.