ನವದೆಹಲಿ:ಭಾರತದ ಇತರೆ ರಾಜ್ಯಗಳಿಗೆ ಹೋಲಿಸಿದರೆ ಬಿಹಾರವು 2019-20ರಲ್ಲಿ ತಲಾ ಆದಾಯದಲ್ಲಿ ಅತಿ ಹೆಚ್ಚಿನ ಬೆಳವಣಿಗೆ ದಾಖಲಿಸಿದೆ ಎಂದು ಸಂಸತ್ತಿನಲ್ಲಿ ಸರ್ಕಾರ ತಿಳಿಸಿದೆ.
ಸರ್ಕಾರದ ಅಂದಾಜಿನ ಪ್ರಕಾರ, ವರ್ಷದ ಹಿಂದಿನ ಮಟ್ಟಕ್ಕೆ ಹೋಲಿಸಿದರೆ 2019-20ರಲ್ಲಿ ಬಿಹಾರದ ತಲಾ ಆದಾಯವು ಶೇ 9.13ರಷ್ಟು ಏರಿಕೆಯಾಗಿದೆ. ರಾಜ್ಯಸಭೆಯಲ್ಲಿ ಕೇಳಲಾದ ಪ್ರಶ್ನೆಗೆ ಅಂಕಿಅಂಶ ಮತ್ತು ಕಾರ್ಯಕ್ರಮ ಅನುಷ್ಠಾನದ ರಾಜ್ಯ ಸಚಿವ ರಾವ್ ಇಂದರ್ಜಿತ್ ಸಿಂಗ್ ಅವರು ಈ ಮಾಹಿತಿ ಬಹಿರಂಗಪಡಿಸಿದ್ದಾರೆ.
ಬಿಹಾರ ಹೊರತಾಗಿ 2019-20ರಲ್ಲಿ ತಮಿಳುನಾಡಿನ ತಲಾ ಆದಾಯವು ಶೇ 7.63ರಷ್ಟು ಹಾಗೂ ಆಂಧ್ರಪ್ರದೇಶದ ಆದಾಯವು ಶೇ 7.55ರಷ್ಟು ಏರಿಕೆಯಾಗಿದೆ. ಉತ್ತರ ಪ್ರದೇಶವು ತಲಾ ಆದಾಯದಲ್ಲಿ ಅತ್ಯಂತ ಕಡಿಮೆ ಬೆಳವಣಿಗೆಯ ದರವಾದ ಶೇ 2.76ರಷ್ಟು ದಾಖಲಿಸಿದೆ. 2019-20ರಲ್ಲಿ ರಾಜಸ್ಥಾನದ ತಲಾ ಆದಾಯವು ಶೇ 3.54ರಷ್ಟು ಹೆಚ್ಚಾಗಿದ್ದರೆ. ಆದರೆ ಛತ್ತೀಸ್‌ಗಢದ ಬೆಳವಣಿಗೆಯ ದರವು ಶೇ 3.51ರಷ್ಟಿದೆ.