ಮುಂಬೈ:ಪ್ರಧಾನ ಮಂತ್ರಿ ಫಸಲ್ ಬೀಮಾ ಯೋಜನೆ ಅಡಿಯಲ್ಲಿ, ಮಹಾರಾಷ್ಟ್ರ ಮತ್ತು ಕರ್ನಾಟಕ ಸರ್ಕಾರಗಳಿಂದ ಖಾಸಗಿ ಜೀವರಹಿತ ವಿಮೆದಾರ ಭಾರತಿ ಎಎಕ್ಸ್‌ಎ ಜನರಲ್ ಇನ್ಶುರೆನ್ಸ್ ಕಂಪನಿಯು 800 ಕೋಟಿ ರೂ. ಮೌಲ್ಯದ ಬೆಳೆ ವಿಮೆ ಆದೇಶ ಸ್ವೀಕರಿಸಿದೆ.
ಮಹಾರಾಷ್ಟ್ರದ ಆರು ಜಿಲ್ಲೆಗಳು ಮತ್ತು ಕರ್ನಾಟಕದ ಮೂರು ಜಿಲ್ಲೆಗಳಲ್ಲಿ ಪಿಎಂಎಫ್‌ಬಿವೈ ಜಾರಿಗೆ ತರಲು ಕಂಪನಿಯು ಎರಡೂ ರಾಜ್ಯ ಸರ್ಕಾರಗಳಿಂದ ಮೂರು ವರ್ಷಗಳ ಕಾಲ ಅಧಿಕಾರವನ್ನು ಪಡೆದುಕೊಂಡಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
ಬಿತ್ತನೆಯಿಂದ ಕಳಪೆ ಇಳುವರಿ, ಉತ್ಪನ್ನದಿಂದ ಹಿಡಿದು ಕೊಯ್ಲು ಮತ್ತು ಸುಗ್ಗಿಯ ನಂತರದವರೆಗೆ ಇಡೀ ಬೇಸಾಯ ಚಕ್ರದಲ್ಲಿ ಬೆಳೆಗಳ ನಷ್ಟಕ್ಕೆ ಪಿಎಂಎಫ್‌ಬಿವೈ ರೈತರಿಗೆ ವಿಮಾ ರಕ್ಷಣೆ ನೀಡುತ್ತದೆ.
ಎರಡೂ ರಾಜ್ಯಗಳಲ್ಲಿನ ರೈತರಿಗೆ ಬೆಳೆ ವಿಮೆ ಅನುಷ್ಠಾನಗೊಳಿಸುವುದರ ಜೊತೆಗೆ ಪಿಎಂಎಫ್‌ಬಿವೈ ಬಗ್ಗೆ ಸಂಬಂಧಿತ ಮಾಹಿತಿ ಹಂಚಿಕೊಳ್ಳಲು ನವೀನ ತಂತ್ರಜ್ಞಾನ ಮತ್ತು ಡಿಜಿಟಲ್ ಸಾಮರ್ಥ್ಯಗಳನ್ನು ಬಳಸಿಕೊಳ್ಳುತ್ತೇವೆ. ಆಯಾ ಜಿಲ್ಲೆಗಳಲ್ಲಿ ತ್ವರಿತ ಮತ್ತು ತಕರಾರು ಮುಕ್ತ ರೈಟ್ಸ್ ಕ್ಲೈಮ್ಗಳ ಮೌಲ್ಯಮಾಪನಗಳನ್ನು ಖಚಿತಪಡಿಸುತ್ತೇವೆ ಎಂದು ಕಂಪನಿಯ ಸಿಇಒ ಮತ್ತು ಎಂಡಿ ಸಂಜೀವ್ ಶ್ರೀನಿವಾಸನ್ ಹೇಳಿದರು.
ಮಹಾರಾಷ್ಟ್ರದ ಅಹಮದ್‌ನಗರ, ನಾಸಿಕ್, ಚಂದ್ರಪುರ, ಸೋಲಾಪುರ, ಜಲ್ಗಾಂವ್ ಮತ್ತು ಸತಾರಾ ಹಾಗೂ ಕರ್ನಾಟಕದ ಧಾರವಾಡ, ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿನ ರೈತರು ತಮ್ಮ ಖಾರಿಫ್ ಬೆಳೆಗಳನ್ನು 2020 ಜುಲೈ 31ರವರೆಗೆ ಆಯಾ ಬ್ಯಾಂಕ್ಗಳು ಅಥವಾ ಕಂಪನಿಯ ಅಧಿಕೃತ ಪ್ರತಿನಿಧಿಗಳ ಮೂಲಕ ವಿಮೆ ಮಾಡಬಹುದು.
ಕಂಪನಿಯು ಹಲವು ವರ್ಷಗಳಿಂದ ಸರ್ಕಾರಿ ಪ್ರಾಯೋಜಿತ ಬೆಳೆ ವಿಮಾ ಯೋಜನೆಯಲ್ಲಿ ಭಾಗವಹಿಸುತ್ತಿದ್ದು, ಬಿಹಾರ, ಕರ್ನಾಟಕ, ಗುಜರಾತ, ಜಾರ್ಖಂಡ್ ಮತ್ತು ಮಹಾರಾಷ್ಟ್ರದ 28.44 ಲಕ್ಷ ರೈತರಿಗೆ ವಿಮೆ ನೀಡಿದೆ.