ನವದೆಹಲಿ: ಆರು ವರ್ಷಗಳ ಹಿಂದೆ ಆರಂಭವಾದ ಕೇಂದ್ರದ ಮಹತ್ವಕಾಂಕ್ಷೆಯ ಪ್ರಧಾನ ಮಂತ್ರಿ ಜನ್ ಧನ್ ಯೋಜನೆಯ (ಪಿಎಂಜೆಡಿವೈ ) ಅಡಿ ಇದುವರೆಗೆ 40.05 ಕೋಟಿ ಖಾತೆಗಳು ತೆರೆಯಲಾಗಿದೆ.
ಈ ಎಲ್ಲ ಖಾತೆಗಳಲ್ಲಿ ಇದುವರೆಗೂ ಜಮಾ ಆಗಿರುವ ಒಟ್ಟಾರೆ ಮೊತ್ತವು ₹ 1.30 ಲಕ್ಷ ಕೋಟಿಗಿಂತ ಅಧಿಕವಾಗಿದೆ. ಇದೊಂದು ವಿಶ್ವದಲ್ಲೇ ಮೈಲಿಗಲ್ಲಾಗಿ ದಾಟಲಾಗಿದೆ. ಕಟ್ಟಕಡೆಯ ವ್ಯಕ್ತಿಗೂ ಆರ್ಥಿಕ ಒಳಗೊಳ್ಳುವಿಕೆಯ ಕಾರ್ಯಕ್ರಮದಡಿ ತೆಗೆದುಕೊಂಡು ಹೋಗಲು ಬದ್ಧರಾಗಿದ್ದೇವೆ ಎಂದು ಕೇಂದ್ರ ಹಣಕಾಸು ಸೇವೆಗಳ ಇಲಾಖೆ ಹೇಳಿದೆ.
ಪಿಎಂಜೆಡಿವೈ ಅನ್ನು ಪ್ರಧಾನಿ ನರೇಂದ್ರ ಮೋದಿ ಅವರು 2014ರ ಆಗಸ್ಟ್ 28ರಂದು ಚಾಲನೆ ನೀಡಿದ್ದರು. ಎಲ್ಲರಿಗೂ ಬ್ಯಾಂಕಿಂಗ್ ಸೌಲಭ್ಯ ಸಿಗುವಂತೆ ಮಾಡುವುದು ಈ ಯೋಜನೆಯ ಉದ್ದೇಶ. ಈ ಯೋಜನೆಯ ಅಡಿ ತೆರೆದ ಉಳಿತಾಯ ಖಾತೆಗಳಲ್ಲಿ ಕನಿಷ್ಠ ಮೊತ್ತ ಕಾಯ್ದುಕೊಳ್ಳುವ ಅಗತ್ಯವಿಲ್ಲ.
ಜನಧನ ಖಾತೆ ಹೊಂದಿರುವವರ ಪೈಕಿ ಶೇ 50ರಷ್ಟಕ್ಕಿಂತ ಹೆಚ್ಚಿನವರು ಮಹಿಳೆಯರು. ಕೋವಿಡ್-19ನಿಂದ ಸೃಷ್ಟಿಯಾದ ಬಿಕ್ಕಟ್ಟಿನ ಸಂದರ್ಭದಲ್ಲಿ ಪ್ರಧಾನಮಂತ್ರಿ ಗರೀಬ್ ಕಲ್ಯಾಣ ಯೋಜನೆಯಡಿ ಮಹಿಳೆಯರಿಗೆ 500 ರೂ. ಅನ್ನು ಜನ್‌ಧನ್ ಖಾತೆಗಳಿಗೆ ನೇರ ವರ್ಗಾವಣೆ ಮಾಡುತ್ತಿದೆ.