ನವದೆಹಲಿ:ಭಾರಿ ದಂಡದ ಕಾರಣ ಹೊಸ ಮೋಟಾರು ವಾಹನ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರಲು ಬಿಜೆಪಿ ಆಡಳಿತವಿರುವ ರಾಜ್ಯ ಸರ್ಕಾರಗಳು ನಿರಾಕರಿಸಿದ್ದವು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಹೋಂಡಾ ಆಕ್ಟಿವಾದ ನೂತನ ಮಾದರಿಯ ಸ್ಕೂಟರ್ ಬಿಡುಗಡೆಗೊಳಿಸಿ ಮೋಟಾರು ವಾಹನ ತಿದ್ದುಪಡಿ ಕಾಯ್ದೆ ಕುರಿತು ಮಾತನಾಡಿದ ಅವರು, ಬಿಜೆಪಿ ಆಡಳಿತದ ಗುಜರಾತ್ ಸೇರಿದಂತೆ ವಿವಿಧ ರಾಜ್ಯ ಸರ್ಕಾರಗಳ ಪ್ರತಿಕ್ರಿಯೆಗಳನ್ನು ಕೇಳಲಾಗಿತ್ತು. ಭಾರಿ ದಂಡದ ಕಾರಣ ಹೊಸ ಮೋಟಾರು ವಾಹನಗಳ ಕಾನೂನನ್ನು ಜಾರಿಗೆ ತರಲು ಅವುಗಳು ನಿರಾಕರಿಸಿದ್ದವು. ಇದು ಸಮವರ್ತಿ ಪಟ್ಟಿಯಲ್ಲಿ ಇರುವುದರಿಂದ ರಾಜ್ಯಗಳು ತಮ್ಮದೇ ಆದ ನಿರ್ಧಾರ ತೆಗೆದುಕೊಳ್ಳಲು ಸ್ವತಂತ್ರವಾಗಿವೆ ಎಂದರು.
ಭಾರಿ ದಂಡದ ಉದ್ದೇಶವು ಹೆಚ್ಚುವರಿ ಆದಾಯವನ್ನು ಸೃಷ್ಟಿಸುವುದಲ್ಲ. ಅಪಘಾತಗಳನ್ನು ತಡೆಗಟ್ಟುವುದು ಮತ್ತು ಜನರ ಜೀವ ಉಳಿಸುವುದು ಎಂದು ಅವರು ಸ್ಪಷ್ಟನೆ ನೀಡಿದರು.
ವಾಹನಗಳ ಜಿಎಸ್‌ಟಿ ದರ ಕಡಿಮೆ ಮಾಡುವ ಬಗ್ಗೆ ರಾಜ್ಯ ಸರ್ಕಾರಗಳು ಮತ್ತು ಜಿಎಸ್‌ಟಿ ಮಂಡಳಿ ಜೊತೆಗೆ ಹಣಕಾಸು ಸಚಿವಾಲಯ ತೀರ್ಮಾನಿಸಬೇಕಿದೆ. ಈ ನಿಟ್ಟಿನಲ್ಲಿ ಅವರು ಈಗಾಗಲೇ ಹಣಕಾಸು ಸಚಿವರೊಂದಿಗೆ ಮಾತನಾಡಿದ್ದಾರೆ. ಜಿಎಸ್‌ಟಿ ಸ್ಲ್ಯಾಬ್ ಇಳಿಕೆಯ ಚೆಂಡು ಪ್ರಸ್ತುತ ಹಣಕಾಸು ಸಚಿವಾಲಯದ ಅಂಗಳದಲ್ಲಿದೆ. ರಾಜ್ಯ ಸರ್ಕಾರಗಳೊಂದಿಗೆ ಸಮಾಲೋಚಿಸಿ ಸಚಿವಾಲಯವು ಸಕಾರಾತ್ಮಕ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ದ್ವಿಚಕ್ರ ವಾಹನಗಳು ಒಳಗೊಂಡಂತೆ 'ವಾಹನ ಗುಜರಿ ನೀತಿ' ಜಾರಿಯ ಪ್ರಗತಿಯಲ್ಲಿದ್ದು, ಈಗಾಗಲೇ ಕರಡು ಪ್ರತಿ ಸಿದ್ಧವಾಗಿದೆ. ಅದು ಶೀಘ್ರದಲ್ಲೇ ಅನುಮೋದನೆಗೊಳ್ಳಲಿದೆ. ಇನ್ನೂ ವಿವಿಧ ಮಧ್ಯಸ್ಥಗಾರರಿಗೆ ಸಂಬಂಧಿಸಿದ ಸಮಸ್ಯೆಗಳಿವೆ. ತಯಾರಕರ ಮತ್ತು ಹಣಕಾಸು ಸಚಿವಾಲಯದ ಸಹಕಾರಬೇಕಿದೆ ಎಂದು ನಿತಿನ್ ಗಡ್ಕರಿ ತಿಳಿಸಿದ್ದಾರೆ.