ನವದೆಹಲಿ:ಹೂಡಿಕೆದಾರರಿಗೆ ಅನುಕೂಲ ಆಗುವಂತಹ ವಿಧಾನ ಮತ್ತು ಮೂಲಸೌಕರ್ಯಗಳು, ರಕ್ಷಣಾ ಮತ್ತು ಬಾಹ್ಯಾಕಾಶ ಸಂಶೋಧನೆ ಸೇರಿದಂತೆ ನಾನಾ ಕ್ಷೇತ್ರಗಳಲ್ಲಿ ಭರವಸೆಯ ಬೆಳವಣಿಗೆಗೆ ಕೇಂದ್ರ ಸರ್ಕಾರ ಕಾರಣವಾಗಿದೆ. ಹಾಗಾಗಿ, ಭಾರತದಲ್ಲಿ ಹೂಡಿಕೆ ಮಾಡುವಂತೆ ಅಮೆರಿಕದ ಕಂಪನಿಗಳಿಗೆ ಪ್ರಧಾನಿ ನರೇಂದ್ರ ಮೋದಿ ಆಹ್ವಾನ ನೀಡಿದರು.
ಅಮೆರಿಕ- ಭಾರತ ಉದ್ಯಮ ಮಂಡಳಿ ಸ್ಥಾಪನೆಯ 45ನೇ ವಾರ್ಷಿಕೋತ್ಸವದ ಪ್ರಯುಕ್ತ ಆಯೋಜಿಸಿರುವ 2 ದಿನಗಳ ಭಾರತ ಪರಿಕಲ್ಪನಾ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದ ಪ್ರಧಾನಿ, ಇಂದು ಭಾರತದ ಬಗ್ಗೆ ಜಾಗತಿಕ ಆಶಾವಾದವಿದೆ. ಇದಕ್ಕೆ ಕಾರಣ ಭಾರತವು ಮುಕ್ತವಾದ ಅವಕಾಶಗಳು ಮತ್ತು ಆಯ್ಕೆಗಳ ಪರಿಪೂರ್ಣ ಸಂಯೋಜನೆ ನೀಡುತ್ತದೆ ಎಂದರು.
ಭಾರತವು ಪ್ರಮುಖ ವ್ಯವಹಾರ ಶ್ರೇಣಿಯಲ್ಲಿ ಏರಿಕೆಯಾಗಿ ಆಗಿದ್ದು, ನೀವು ಆಶಾವಾದವನ್ನು ನೋಡಬಹುದು. ವಿಶ್ವ ಬ್ಯಾಂಕಿನ ಸುಲಭ ವಹಿವಾಟು ರಾಷ್ಟ್ರಗಳಲ್ಲಿ ಭಾರತ ಮೇಲ್ಮುಖವಾಗಿದೆ. ಪ್ರತಿ ವರ್ಷ ವಿದೇಶಿ ನೇರ ಹೂಡಿಕೆಯಲ್ಲಿ ದಾಖಲೆಯ ಗರಿಷ್ಠ ಮಟ್ಟವನ್ನು ನಾವು ತಲುಪುತ್ತಿದ್ದೇವೆ. 2019-20ರಲ್ಲಿ ಭಾರತದಲ್ಲಿ ಎಫ್‌ಡಿಐ ಒಳಹರಿವು 74 ಬಿಲಿಯನ್ ಡಾಲರ್ ಆಗಿತ್ತು. ಇದು ಹಿಂದಿನ ವರ್ಷಕ್ಕಿಂತ 20 ಪ್ರತಿಶತದಷ್ಟು ಹೆಚ್ಚಾಗಿದೆ ಎಂದರು.
ನಾಗರಿಕ ವಿಮಾನಯಾನ ಕ್ಷೇತ್ರವು ಹೆಚ್ಚಿನ ಸಂಭಾವ್ಯ ಬೆಳವಣಿಗೆಯ ಮತ್ತೊಂದು ಕ್ಷೇತ್ರವಾಗಿದೆ. ಮುಂದಿನ 8 ವರ್ಷಗಳಲ್ಲಿ ವಿಮಾನ ಪ್ರಯಾಣಿಕರ ಸಂಖ್ಯೆ ದ್ವಿಗುಣಗೊಳ್ಳುವ ನಿರೀಕ್ಷೆಯಿದೆ. ಭಾರತದ ಖಾಸಗಿ ವಿಮಾನಯಾನ ಸಂಸ್ಥೆಗಳು ಮುಂಬರುವ ದಶಕದಲ್ಲಿ ಒಂದು ಸಾವಿರಕ್ಕೂ ಹೆಚ್ಚು ಹೊಸ ವಿಮಾನಗಳನ್ನು ಸೇರ್ಪಡೆ ಮಾಡಿಕೊಳ್ಳಲು ಬಯಸುತ್ತಿವೆ ಎಂದರು.