ನವದೆಹಲಿ:ದೇಶದ ಜಿಡಿಪಿಯಲ್ಲಿ ಶೇ 2.3ರಷ್ಟು ಪಾಲು ಹೊಂದಿರುವ ಆಟೋ ಕಾಂಪೊನೆಂಟ್ ಉದ್ಯಮವು ತೆರಿಗೆ ಕಡಿತದ ಬೆಂಬಲದ ಎದುರು ನೋಡುತ್ತಿದೆ ಎಂದು ಉದ್ಯಮ ಸಂಸ್ಥೆ ಎಸಿಎಂಎ ಹೇಳಿದೆ.
ಕೋವಿಡ್ 19 ವೈರಾಣು ತಂದೊಡ್ಡಿದ ಸವಾಲಿನಿಂದ ಉದ್ಯಮದ ವಹಿವಾಟು ಕ್ಷೀಣಿಸಿದೆ. ದೇಶದ 50 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ಒದಗಿಸುವ ಉದ್ಯಮವು ತನ್ನ ಪುನರುಜ್ಜೀವನಕ್ಕೆ ಆಟೋ ಘಟಕಗಳ ಮತ್ತು ವಾಹನಗಳ ಮೇಲೆ ಜಿಎಸ್ ಕಡಿತ ಬಯಸುತ್ತಿದೆ.
ವಾಹನ ಉದ್ಯಮ ಚೇತರಿಕೆ ಅನುಕೂಲ ಆಗುವಂತೆ ಜಿಎಸ್‌ಟಿ ದರದಲ್ಲಿ ಸ್ಲ್ಯಾಬ್ ಕಡಿತ ಮಾಡಬೇಕು. ಸದ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಉದ್ಯಮದ ನೆರವಿಗೆ ಬರುವಂತೆ ಭಾರತೀಯ ವಾಹನ ಬಿಡಿಭಾಗಗಳ ತಯಾರಕರ ಒಕ್ಕೂಟ (ಎಂಸಿಎಂಎ) ಸರ್ಕಾರವನ್ನು ಕೋರಿದೆ.
ಎಲ್ಲಾ ವಾಹನ ವಿಭಾಗಗಳ ಮೇಲಿನ ಜಿಎಸ್‌ಟಿ ಸ್ಲ್ಯಾಬ್ ಶೇ 18ಕ್ಕೆ ಇಳಿಸಬೇಕು. ಪ್ರೋತ್ಸಾಹ ಆಧಾರಿತ ಸ್ಕ್ರ್ಯಾಪೇಜ್ ನೀತಿ ಪರಿಚಯಿಸುವ ಮೂಲಕ ದೇಶದಲ್ಲಿ ವಾಹನ ಬೇಡಿಕೆ ಹೆಚ್ಚಿಸಬೇಕು ಎಂದು ಎಸಿಎಂಎ ಅಧ್ಯಕ್ಷ ದೀಪಕ್ ಜೈನ್ ಸುದ್ದಿಗಾರರಿಗೆ ತಿಳಿಸಿದರು.
ಘಟಕಗಳ ವಲಯಕ್ಕೆ ಸಂಬಂಧಿಸಿದಂತೆ ವಾಹನಗಳ ಬಿಡಿಭಾಗಗಳ ವಲಯದಾದ್ಯಂತ ಏಕರೂಪದ ಶೇ 18ರಷ್ಟು ಜಿಎಸ್‌ಟಿ ದರ ನಿಗದಿಪಡಿಸುವಂತೆ ಶಿಫಾರಸು ಮಾಡುವುದನ್ನು ಮುಂದುವರೆಸಿದೆ. ಪ್ರಸ್ತುತ 60 ಪ್ರತಿಶತ ಬಿಡಿಭಾಗಗಳಿಗೆ ಶೇ 18 ತೆರಿಗೆ, ಉಳಿದ ಶೇ 40ರಷ್ಟು ಯೂನಿಟ್ಗಳಿಗೆ ಶೇ 28ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಇದನ್ನು ಏಕರೂಪಗೊಳಿಸುವಂತೆ ಮನವಿ ಮಾಡಿದರು.