ನವದೆಹಲಿ: ಭಾರತೀಯ ಆರ್ಥಿಕತೆ ನಿಗಾ ಕೇಂದ್ರದ (ಸಿಎಂಐಇ) ಅಂಕಿ ಅಂಶಗಳ ಪ್ರಕಾರ, ಭಾರತದ ಹೆಚ್ಚು ಜನಸಂಖ್ಯೆ ಹೊಂದಿರುವ ಉತ್ತರ ಪ್ರದೇಶದಲ್ಲಿ ನಿರುದ್ಯೋಗವು ದ್ವಿಗುಣಗೊಂಡಿದೆ ಎಂಬ ವರದಿ ಹೊರ ಬಿದ್ದಿದೆ.
ಯುಪಿಯಲ್ಲಿ ಸರಾಸರಿ ನಿರುದ್ಯೋಗವು 2018ರಲ್ಲಿ ಶೇ 5.91 ಇದ್ದ ನಿರುದ್ಯೋಗ ಶೇ 9.95ಕ್ಕೆ ಏರಿಕೆಯಾಗಿದೆ. 2011ರ ಜನಗಣತಿಯ ಪ್ರಕಾರ, ಯುಪಿಯಲ್ಲಿ ಸುಮಾರು 20 ಕೋಟಿ ಜನರಿದ್ದು, ಇದು ಭಾರತದ ಒಟ್ಟು ಜನಸಂಖ್ಯೆಯಲ್ಲಿ ಶೇ 16ಕ್ಕಿಂತ ಅಧಿಕವಾಗಿದೆ.
ಶೇ 10 ರಷ್ಟು ನಿರುದ್ಯೋಗ ದರ ಎಂದರೆ ಪ್ರತಿ 100 ಜನರಲ್ಲಿ ಸುಮಾರು 10 ಜನರು ನಿರುದ್ಯೋಗಿಗಳಾಗಿದ್ದಾರೆ ಎಂದರ್ಥ. 20 ಕೋಟಿಯಲ್ಲಿ 2 ಕೋಟಿ ಜನರು ಉದ್ಯೋಗ ಇಲ್ಲದೆ ಕಾಲ ದೂಡುತ್ತಿದ್ದಾರೆ ಎನ್ನುತ್ತಿದೆ ವರದಿ.
ದೇಶದ ಆರ್ಥಿಕ ಚಟುವಟಿಕೆಯಲ್ಲಿ ಗಮನಾರ್ಹ ಕುಸಿತದಿಂದಾಗಿ ಯುಪಿಯಲ್ಲಿ ನಿರುದ್ಯೋಗ ರಾಷ್ಟ್ರೀಯ ಮಟ್ಟದ ಸರಾಸರಿ ಶೇ 7.7ಕ್ಕಿಂತ ಹೆಚ್ಚಾಗಿದೆ. ಭಾರತದ ಜಿಡಿಪಿ ಬೆಳವಣಿಗೆಯ ದರ ಸಹ ಕೇವಲ ಒಂದು ವರ್ಷದಲ್ಲಿ ಶೇ 2ಕ್ಕೂ ಅಧಿಕ ಪ್ರಮಾಣದಲ್ಲಿ ಕುಸಿದಿದೆ.
ದೇಶದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯಗಳಲ್ಲಿ ನಿರುದ್ಯೋಗವೂ ಹೆಚ್ಚುತ್ತಿದೆ. ಎರಡನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಮಹಾರಾಷ್ಟ್ರದಲ್ಲಿ 2018ರಲ್ಲಿ ಶೇ 3.81ರಷ್ಟು ಇದ್ದದ್ದು 2019ರಲ್ಲಿ ಶೇ 4.87ಕ್ಕೆ ಏರಿದೆ.
ನಿರುದ್ಯೋಗವು 2018ರಿಂದ 2019ಕ್ಕೆ ಬಿಹಾರದಲ್ಲಿ ಶೇ 7.84ರಿಂದ ಶೇ 11.47ಕ್ಕೆ, ಆಂಧ್ರಪ್ರದೇಶದಲ್ಲಿ ಶೇ 4.6ರಿಂದ ಶೇ 4.71ಕ್ಕೆ ಹಾಗೂ ಪಶ್ಚಿಮ ಬಂಗಾಳದಲ್ಲಿ ಶೇ 6.36ರಿಂದ ಶೇ 7.05ಕ್ಕೆ ಹೆಚ್ಚಳವಾಗಿದೆ.