ಹೈದರಾಬಾದ್:ಕಳೆದ 137 ದಿನಗಳ ನಂತರ ದೇಶದಲ್ಲಿ ಮತ್ತೊಮ್ಮೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದೆ. ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲೂ 50 ರೂ ಜಾಸ್ತಿಯಾಗಿದೆ. ಪ್ರಸಕ್ತ ಹಣಕಾಸು ವರ್ಷದ ಕೊನೆಯ ತಿಂಗಳು ಇದಾಗಿರುವ ಕಾರಣ ಇಂಧನ ಹೊರತುಪಡಿಸಿ, ಇತರೆ ಸರಕು ಮತ್ತು ಉತ್ಪನ್ನಗಳ ಬೆಲೆಯಲ್ಲೂ ಗಣನೀಯವಾದ ಹೆಚ್ಚಳ ಕಂಡು ಬರುವ ಸಾಧ್ಯತೆ ದಟ್ಟವಾಗಿದೆ.
ಯಾವೆಲ್ಲ ವಸ್ತುಗಳ ಬೆಲೆ ಏರಿಕೆ?
ಪ್ಯಾಕೆಟ್ ಹಾಲು ಮತ್ತಷ್ಟು ತುಟ್ಟಿ: ಸಹಕಾರಿ ಹಾಲು ಒಕ್ಕೂಟಗಳಾದ ಅಮೂಲ್, ಮದರ್ ಡೈರಿ ಸೇರಿದಂತೆ ಅನೇಕ ಕಂಪನಿಗಳು ತಮ್ಮ ಹಾಲಿನ ಬೆಲೆಯಲ್ಲಿ ಈಗಾಗಲೇ 2 ರೂ. ಏರಿಸಿವೆ. ಮಧ್ಯಪ್ರದೇಶದ ಸಾಂಚಿ ಹಾಲು ಒಕ್ಕೂಟ ಕೂಡ ಪ್ರತಿ ಲೀಟರ್ ಹಾಲಿನ ಮೇಲೆ 5 ರೂ ಏರಿಕೆ ಮಾಡುವ ಸಾಧ್ಯತೆ ಇದೆ.
LPG ಸಿಲಿಂಡರ್ ಇನ್ನಷ್ಟು ದುಬಾರಿ: ಎಲ್ಪಿಜಿ ಸಿಲಿಂಡರ್ ಮೇಲೆ ಈಗಾಗಲೇ 50 ರೂ ಏರಿಕೆಯಾಗಿದೆ. ಅಂತರರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯೇರಿದ್ದು, ಮೇಲಿಂದ ಮೇಲೆ ಪೆಟ್ರೋಲ್, ಡೀಸೆಲ್ ಜೊತೆಗೆ ಅಡುಗೆ ಅನಿಲ ಕೂಡ ಗ್ರಾಹಕ ಜೇಬಿಗೆ ಭಾರವಾಗುತ್ತಿದೆ.
ಇದನ್ನೂ ಓದಿ:ಪಂಜಾಬ್ ಬಿಟ್ಟು ಲಖನೌ ತಂಡ ಸೇರಿದ್ದೇಕೆ? ಕೆ.ಎಲ್.ರಾಹುಲ್ ಹೊರಹಾಕಿದ್ರು ರಹಸ್ಯ!
ಮ್ಯಾಗಿ ನೂಡಲ್ಸ್, ಟೀ ಪೌಡರ್ ತುಸು ದುಬಾರಿ:ಮ್ಯಾಗಿ ತಯಾರು ಮಾಡುವ ನೆಸ್ಲೆ ಕಂಪನಿ ಈಗಾಗಲೇ ಇದರ ಬೆಲೆಯಲ್ಲಿ ಎರಡು ರೂ. ಏರಿಕೆ ಮಾಡುವುದಾಗಿ ಘೋಷಣೆ ಮಾಡಿದೆ. ಪರಿಣಾಮ, ಇನ್ಮುಂದೆ ಚಿಕ್ಕ ಪ್ಯಾಕೆಟ್ 12 ರೂ. ಬದಲಿಗೆ 14 ರೂಪಾಯಿಗೆ ಲಭ್ಯವಾಗಲಿದೆ. ಇದರ ಜೊತೆಗೆ, ನೆಸ್ಕೆಫೆ, ಬ್ರೂ, ತಾಜ್ ಮಹಲ್ ಟೀ ಪೌಡರ್ಗಳ ಬೆಲೆಯಲ್ಲೂ ಸ್ವಲ್ಪ ಏರಿಕೆ ಕಂಡು ಬರಲಿದೆ.
ಉಕ್ರೇನ್-ರಷ್ಯಾ ನಡುವೆ ಯುದ್ಧ ನಡೆಯುತ್ತಿರುವ ಕಾರಣ ಈಗಾಗಲೇ ಅಡುಗೆ ಎಣ್ಣೆ ಬೆಲೆ ಗಗನಕ್ಕೇರಿದ್ದು, ಪ್ರತಿ ಲೀಟರ್ ಬೆಲೆ 200ರ ಗಡಿಯಲ್ಲಿದೆ. ಉಭಯ ದೇಶಗಳ ನಡುವಿನ ಸಂಘರ್ಷ ಇನ್ನೂ ಮುಂದುವರಿದರೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.