ಇಸ್ಲಾಮಾಬಾದ್: ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನದ 370 ವಿಧಿಯನ್ನು ರದ್ದುಪಡಿಸಿದ ನಂತರ ಭಾರತದೊಂದಿಗಿನ ವ್ಯಾಪಾರ ಸಂಬಂಧವನ್ನು ಸ್ಥಗಿತಗೊಳಿಸಿರುವ ಪಾಕಿಸ್ತಾನದಲ್ಲಿ ಎಲ್ಲ ವಿಧದ ಆಹಾರ ಪದಾರ್ಥಗಳ ಬೆಲೆ ಗಗನಕ್ಕೇರಬಹುದೆಂದು ಪಾಕಿಸ್ತಾನದಾದ್ಯಂತ ಜನರು ಭಯಭೀತರಾಗಿದ್ದಾರೆ.
ಭಾರತದ ಆಹಾರ ಆಮದಿನ ಮೇಲಿನ ನಿಷೇಧವು ಪಾಕಿಸ್ತಾನದಲ್ಲಿ ಹಣದುಬ್ಬರದ ಒತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತಿದೆ. ಈಗಾಗಲೇ ಆರ್ಥಿಕವಾಗಿ ಕಂಗೆಟ್ಟಿರುವ ಪಾಕಿಸ್ತಾನಿಯರು ನಿತ್ಯದ ಸಾಮಗ್ರಿಗಳ ಖರೀದಿಗೆ ಪರದಾಡುವಂತಾಗಿದೆ. ಏರುತ್ತಿರುವ ದಿನಸಿ ಪದಾರ್ಥಗಳ ಬೆಲೆ, ಹೀರಿಕೊಳ್ಳುತ್ತಿರುವ ವೆಚ್ಚದಿಂದ ಮನೆಯ ಬಜೆಟ್ ನಿರ್ವಹಿಸುವುದು ದುರ್ಬಲವಾಗುತ್ತಿದೆ ಎಂದು ವ್ಯಾಪಾರಿಗಳು ಮತ್ತು ಜನರು ಅಲವತ್ತುಕೊಳ್ಳುತ್ತಿದ್ದಾರೆ.
ಪ್ರಸ್ತುತ ದಿನಗಳಲ್ಲಿ ಹೆಚ್ಚುತ್ತಿರುವ ಹಣದುಬ್ಬರದ ಪ್ರಮಾಣವು ನಮ್ಮ ದೈನಂದಿನ ಅಡುಗೆ ವೆಚ್ಚ ದುಬಾರಿಗೊಳಿಸುತ್ತಿದೆ. ಆದಾಯದಲ್ಲೂ ಹೆಚ್ಚಳವಿಲ್ಲದೇ ಹಾಲಿನಿಂದ ತರಕಾರಿ, ಮಾಂಸದವರೆಗೆ ಎಲ್ಲವೂ ದುಬಾರಿಯಾಗಿದೆ. ಭಾರತದೊಂದಿಗೆ ವ್ಯಾಪಾರ ಸಂಬಂಧ ಕಡಿಗೊಳಿಸಿದ್ದು, ನಮ್ಮ ದೈನಂದಿನ ಆಹಾರ ಸಾಮಗ್ರಿಗೆ ಬೆಲೆಯನ್ನು ಮತ್ತಷ್ಟು ಹೆಚ್ಚಿಸುತ್ತವೆ ಎಂದು ಪಾಕ್ನ ಮಹಿಳೆ ಬೇಸರ ವ್ಯಕ್ತಪಡಿಸಿದ್ದಾರೆ.