ನವದೆಹಲಿ: ಕೋವಿಡ್-19 ಸಾಂಕ್ರಾಮಿಕ ವಿರುದ್ಧದ ಭಾರತ ಹೋರಾಟಕ್ಕೆ ಏಷ್ಯಾ ಪೆಸಿಫಿಕ್ ವಿಪತ್ತು ಪ್ರತಿಕ್ರಿಯೆ ನಿಧಿಯಿಂದ 3 ಮಿಲಿಯನ್ ಅಮೆರಿಕನ್ ಡಾಲರ್ (ಸುಮಾರು 22 ಕೋಟಿ ರೂ.) ಅನುದಾನ ಒದಗಿಸಲು ಅನುಮೋದನೆ ದೊರಕಿದೆ ಎಂದು ಏಷ್ಯಾ ಅಭಿವೃದ್ಧಿ ಬ್ಯಾಂಕ್ (ಎಡಿಬಿ) ಬುಧವಾರ ತಿಳಿಸಿದೆ.
ಜಪಾನ್ ಸರ್ಕಾರ ಹಣಕಾಸು ಒದಗಿಸುವ ಈ ಅನುದಾನವನ್ನು ಭಾರತವು ತನ್ನ ಕೋವಿಡ್-19 ಹೋರಾಟದಲ್ಲಿ ಥರ್ಮಲ್ ಸ್ಕ್ಯಾನರ್ ಮತ್ತು ಅಗತ್ಯ ಸರಕುಗಳ ಜಮಾವಣೆಗೆ ಬಳಸಿಕೊಳ್ಳಬಹುದು ಎಂದು ಎಡಿಬಿ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಹೊಸ ಅನುದಾನವು ಎಒಡಿಬಿ, ಕೋವಿಡ್ -19 ವಿರುದ್ಧ ಭಾರತದ ಸರ್ಕಾರದ ಹೋರಾಟವನ್ನು ಬಲಪಡಿಸಲು ನೀಡುತ್ತಿರುವ ಬೆಂಬಲವಾಗಿದೆ. ಇದು ರೋಗದ ಕಣ್ಗಾವಲು ಹೆಚ್ಚಿಸುತ್ತದೆ. ಆರಂಭಿಕ ರೋಗದ ಪತ್ತೆ, ಸಂಪರ್ಕದ ಹಿಸ್ಟರಿ ಮತ್ತು ಚಿಕಿತ್ಸೆಗೆ ನೆರವಾಗಲಿದೆ. ಇತರ ಸಾರ್ವಜನಿಕ ಆರೋಗ್ಯ ಕ್ರಮಗಳಿಗೂ ಪೂರಕವಾಗಲಿದೆ ಎಂದು ಹೇಳಿದೆ.
ಏಪ್ರಿಲ್ 28ರಂದು ಎಡಿಬಿ 1.5 ಬಿಲಿಯನ್ ಅಮೆರಿಕನ್ ಡಾಲರ್ ಅನ್ನು ಕೋವಿಡ್-19 ಆ್ಯಕ್ಟಿವ್ ರೆಸ್ಪಾನ್ಸ್ ಆ್ಯಂಡ್ ಎಕ್ಸ್‌ಪೆಂಡಿಚರ್ ಸಪೋರ್ಟ್ (ಕೇರ್ಸ್) ಕಾರ್ಯಕ್ರಮದಡಿ ಭಾರತಕ್ಕೆ ನೀಡಿತ್ತು. ಇದರಲ್ಲಿ ರೋಗ ತಡೆಗಟ್ಟುವಿಕೆ, ಬಡವರಿಗೆ ಮತ್ತು ಆರ್ಥಿಕವಾಗಿ ದುರ್ಬಲರಿಗೆ ಸಾಮಾಜಿಕ ರಕ್ಷಣಾ ಕ್ರಮಗಳು ಸೇರಿದ್ದವು.