ನವದೆಹಲಿ: ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರವು (ಯುಎಡಿಎಐ) ಆಧಾರ್ ಕಾರ್ಡ್ ಮಾಡಿಸಲು ಅಥವಾ ತಿದ್ದುಪಡಿಗೆ ನೆರವಾಗಲು ವಾರದ 7 ದಿನವೂ ಆಧಾರ್ ಸೇವಾ ಕೇಂದ್ರ ತೆರೆಯಲಿದೆ.
ಆಧಾರ್ ಸೇವಾ ಕೇಂದ್ರಗಳಲ್ಲಿ ಸಾರ್ವಜನಿಕರ ಮನವಿಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯುಎಡಿಎಐ ಈ ನಿರ್ಧಾರ ತೆಗೆದುಕೊಂಡಿದೆ. ಒಂದು ಸೇವಾ ಕೇಂದ್ರ ದಿನದಲ್ಲಿ 1,000 ಆಧಾರ್ ಕಾರ್ಡ್ ದಾಖಲಾತಿ ಅಥವಾ ನವೀಕರಣ ಮನವಿಗಳನ್ನು ಸ್ವೀಕರಿಸುವ ಸಾಮರ್ಥ್ಯ ಹೊಂದಿದೆ. ನಿಮ್ಮ ಹತ್ತಿರ ಆಧಾರ್ ಸೇವಾ ಕೇಂದ್ರಕ್ಕೆ ಭೇಟಿ ನೀಡಿ ಸೇವೆಗಳನ್ನು ಪಡೆಯುವಂತೆ ಟ್ವಿಟ್ಟರ್ ಮುಖಾಂತರ ತಿಳಿಸಿದೆ.
ನೂತನ ಆಧಾರ್ ಕಾರ್ಡ್ಗೆ ಅರ್ಜಿ ಸಲ್ಲಿಕೆ ಅಥವಾ ದಾಖಲಾತಿ ಮಾಡುವುದರ ಜೊತೆಗೆ ನಿಮ್ಮ ವಿಳಾಸ, ಮೊಬೈಲ್ ಸಂಖ್ಯೆ, ಇ- ಮೇಲ್ ಐಡಿ, ಜನ್ಮ ದಿನಾಂಕ ಸೇರಿದಂತೆ ಇತರ ಮಾಹಿತಿ ನವೀಕರಸಬಹುದು. ಭಾವಚಿತ್ರ ಹಾಗೂ ಬಯೋಮೆಟ್ರಿಕ್ ಡೇಟಾ ಸಹ ನವೀಕರಿಸಬಹುದಾಗಿದೆ.
ಯುಎಡಿಎಐ ವೆಬ್ಸೈಟ್ನಲ್ಲಿ ಪ್ರದರ್ಶಿಸಿರುವಂತೆ ಪ್ರಸ್ತುತ ಕನಿಷ್ಠ 19 ಕ್ರಿಯಾತ್ಮಕ ಆಧಾರ್ ಸೇವಾ ಕೇಂದ್ರಗಳಿವೆ. 2019ರ ಅಂತ್ಯದ ವೇಳೆಗೆ ದೇಶದ 53 ನಗರಗಳಲ್ಲಿ 114 ಕೇಂದ್ರಗಳನ್ನು ತೆರೆಯಲು ಯೋಜಿಸಿದೆ. ಸಮೀಪದ ಆಧಾರ್ ಸೇವಾ ಕೇಂದ್ರಗಳನ್ನು ಪತ್ತೆಹಚ್ಚಲು ಯುಎಡಿಎಐ ವೆಬ್ಸೈಟ್ನ ಬುಕ್ ಎನಾ ಅಪಾಯಿಂಟ್ಮೆಂಟ್ (Book an appointment) ಪೇಜ್‌ಗೆ ಭೇಟಿ ನೀಡಬೇಕು. ಅಲ್ಲಿನ ಡ್ರಾಪ್ಡೌನ್ ಮೆನುವಿನಲ್ಲಿ ಪ್ರಸ್ತುತ ಆಧಾರ್ ಕೇಂದ್ರಗಳು ಕಾರ್ಯನಿರ್ವಹಿಸುತ್ತಿರುವ ಎಲ್ಲ ಸ್ಥಳಗಳ ಹೆಸರುಗಳಿವೆ.
ಬೆಂಗಳೂರು, ದೆಹಲಿ, ಪಾಟ್ನಾ, ಹೈದರಾಬಾದ್, ಆಗ್ರಾ, ಚೆನ್ನೈ, ಹಿಸಾರ್, ಲಖನೌ, ವಿಜಯವಾಡ, ಭೋಪಾಲ್, ಡೆಹ್ರಾಡೂನ್, ರಾಂಚಿ, ಗುವಾಹಟಿ, ಮೈಸೂರು ಮತ್ತು ಜೈಪುರ ಸೇರಿದಂತೆ ಹಲವು ಸ್ಥಳಗಳ ಹೆಸರುಗಳಿವೆ. ನಿಮ್ಮ ಆಯ್ಕೆಯ ಕೇಂದ್ರವನ್ನು ಆಯ್ದು ನಿಮ್ಮ ಮೊಬೈಲ್ ನಂಬರ್ ನೀಡುವ ಮೂಲಕ ಅಪಾಯಿಂಟ್ಮೆಂಟ್ ಕಾಯ್ದಿರಿಸಬಹುದು.