ಕರ್ನಾಟಕ

karnataka

By

Published : Nov 4, 2020, 9:41 PM IST

ETV Bharat / business

2021ರಲ್ಲಿ ಶೇ. 87ರಷ್ಟು ಕಂಪನಿಗಳಿಂದ ವೇತನ ಹೆಚ್ಚಳಕ್ಕೆ ಚಿಂತನೆ: ಸಮೀಕ್ಷೆ

2021ರ ವೇಳೆಗೆ ಶೇಕಡಾ 87ರಷ್ಟು ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ವೇತನವನ್ನು ಹೆಚ್ಚಿಸಲು ಬಯಸುತ್ತಿವೆ ಎಂದು ಸಮೀಕ್ಷೆಯೊಂದು ತನ್ನ ವರದಿಯಲ್ಲಿ ಹೇಳಿದೆ.

representational image
ಪ್ರಾತಿನಿಧಿಕ ಚಿತ್ರ

ನವದೆಹಲಿ:2020ರ ಎರಡನೇ ಹಾಗೂ ಮೂರನೇ ತ್ರೈಮಾಸಿಕದಲ್ಲಿ ಭಾರತೀಯ ಕಂಪನಿಗಳಲ್ಲಿ ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದ್ದು, ಶೇಕಡಾ 87ರಷ್ಟು ಕಂಪನಿಗಳು 2021ರಲ್ಲಿ ಉದ್ಯೋಗಿಗಳ ವೇತನ ಹೆಚ್ಚಳಕ್ಕೆ ಚಿಂತನೆ ನಡೆಸಿವೆ ಎಂದು ಸಮೀಕ್ಷೆಯೊಂದು ಹೇಳಿದೆ.

ಮುಂದಿನ ವರ್ಷ ವೇತನ ಹೆಚ್ಚಳ ಮಾಡುವ ಕಂಪನಿಗಳಲ್ಲಿ ಶೇಕಡಾ 61ರಷ್ಟು ಕಂಪನಿಗಳು ಶೇಕಡಾ 5ರಿಂದ 10ರಷ್ಟು ವೇತನ ಹೆಚ್ಚಳ ಮಾಡಲು ಮುಂದಾಗಿವೆ ಎಂದು ಜಾಗತಿಕ ವೃತ್ತಿಪರ ಸೇವಾ ಸಂಸ್ಥೆಯಾದ ಅಯಾನ್ ತನ್ನ ಸ್ಯಾಲರಿ ಟ್ರೆಂಡ್ ಸರ್ವೆಯಲ್ಲಿ ಮಾಹಿತಿ ಬಹಿರಂಗಪಡಿಸಿದೆ.

2020ರ ಅವಧಿಯಲ್ಲಿ ಶೇಕಡಾ 71ರಷ್ಟು ಕಂಪನಿಗಳು ಉದ್ಯೋಗಿಗಳ ವೇತನವನ್ನು ಹೆಚ್ಚಿಸಿವೆ. ಇವುಗಳಲ್ಲಿ ಶೇಕಡಾ 45ರಷ್ಟು ಕಂಪನಿಗಳು ತಮ್ಮ ನೌಕರರಿಗೆ ಒಂದೇ ರೀತಿಯಲ್ಲಿ ವೇತನ ಹೆಚ್ಚಿಸಿವೆ ಎಂದು ಸಮೀಕ್ಷೆ ಹೇಳಿದೆ.

ಕೊರೊನಾ ಹಾವಳಿ ದೇಶದಲ್ಲಿ ಹೆಚ್ಚಾಗಿದ್ದರೂ ಇಲ್ಲಿನ ಕೆಲ ಕಂಪನಿಗಳು ಸಮತೋಲನ ಕಾಪಾಡಿಕೊಂಡಿವೆ ಹಾಗೂ ಪ್ರಬುದ್ಧತೆಯನ್ನು ಪ್ರದರ್ಶಿಸಿವೆ ಎಂದು ಅಯಾನ್​ನ ಪಾಲುದಾರ ಹಾಗೂ ಕಂಪನಿಯ ಸಿಇಒ ಆಗಿರುವ ನಿತಿನ್ ಸೇಥಿ ಹೇಳಿದ್ದಾರೆ.

ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥರು ಅತ್ಯಂತ ಕಠಿಣ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಎರಡು ಮತ್ತು ಮೂರನೇ ತ್ರೈಮಾಸಿಕದಲ್ಲಿ ಈ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಗ್ರಾಹಕರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗಿದೆ. ತಮ್ಮ ಉದ್ಯಮ ಚೇತರಿಕೆಗಾಗಿ ಹೊಸ ಕೌಶಲ್ಯ ಹಾಗೂ ಪ್ರತಿಭೆಗಳನ್ನು ಅಳವಡಿಸಿಕೊಳ್ಳಲು ಉದ್ಯಮಿಗಳು ಮುಂದಾಗಿದ್ದಾರೆ ಎಂದು ನಿತಿನ್ ಸೇಥಿ ಅಭಿಪ್ರಾಯಪಟ್ಟಿದ್ದಾರೆ.

ಉನ್ನತ ತಂತ್ರಜ್ಞಾನ (ಹೈಟೆಕ್), ಮಾಹಿತಿ ತಂತ್ರಜ್ಞಾನ (ಐಟಿ), ಜೀವ ವಿಜ್ಞಾನ, ಇ-ಕಾಮರ್ಸ್, ರಾಸಾಯನಿಕಗಳು ಮತ್ತು ವೃತ್ತಿಪರ ಸೇವಾ ಕ್ಷೇತ್ರಗಳು ಹೆಚ್ಚಿನ ವೇತನ ಹೆಚ್ಚಳ ಮಾಡಲು ಬಯಸುವ ಉದ್ಯಮಗಳಾಗಿವೆ ಎಂದು ವರದಿ ತಿಳಿಸಿದೆ.

2020ರಲ್ಲಿ ತೀರಾ ಕಡಿಮೆ ವೇತನ ಹೆಚ್ಚಳ ನೀಡಿದ್ದ ಚಿಲ್ಲರೆ, ರಿಯಲ್ ಎಸ್ಟೇಟ್, ಮೂಲ ಸೌಕರ್ಯ ಉದ್ಯಮಗಳಲ್ಲಿನ ಕಂಪನಿಗಳು 2021ಕ್ಕೆ ಹೆಚ್ಚಿನ ವೇತನ ನೀಡಲು ಚಿಂತನೆ ನಡೆಸುತ್ತಿವೆ ಎಂದು ವರದಿ ಹೇಳಿದೆ.

ಈ ಸಮೀಕ್ಷೆಗಾಗಿ ಅಯಾನ್ ಸಂಸ್ಥೆ 20 ವಲಯಗಳಲ್ಲಿನ ಸುಮಾರು 1050 ಕಂಪನಿಗಳನ್ನು ಆಯ್ದುಕೊಂಡು ದತ್ತಾಂಶ ಸಂಗ್ರಹಿಸಿದೆ.

ABOUT THE AUTHOR

...view details