ನವದೆಹಲಿ :ವಯಸ್ಕರಲ್ಲಿ ಮಾಡಿರೇಟ್ ಕೋವಿಡ್-19 ಸೋಂಕಿಗೆ ಚಿಕಿತ್ಸೆ ನೀಡುವಲ್ಲಿ ‘ವಿರಾಫಿನ್’, ಪೆಗೈಲೇಟೆಡ್ ಇಂಟರ್ಫೆರಾನ್ ಆಲ್ಫಾ -2ಬಿ (ಪೆಗಿಫ್ಎನ್) ಬಳಕೆಗೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾದಿಂದ (ಡಿಸಿಜಿಐ) ನಿರ್ಬಂಧಿತ ತುರ್ತು ಬಳಕೆ ಅನುಮೋದನೆ ನೀಡಿದೆ ಎಂದು ಝೈಡಸ್ ಕ್ಯಾಡಿಲಾ ತಿಳಿಸಿದೆ.
ವಿರಾಫಿನ್‌ನ ಉಪಯೋಗ ಏನು?
ಆಂಟಿವೈರಲ್ ವಿರಾಫಿನ್‌ನ ಸಿಂಗಲ್ ಡೋಸ್ ಸಬ್ಕ್ಯುಟೇನಿಯಸ್ ರೋಗಿಗಳಿಗೆ ಚಿಕಿತ್ಸೆಯನ್ನು ಹೆಚ್ಚು ಅನುಕೂಲಕರವಾಗಿಸುತ್ತದೆ.
ಕೋವಿಡ್ ಪೀಡಿತರಿಗೆ ವಿರಾಫಿನ್ ಔಷಧಿ ವೇಗವಾಗಿ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಹೆಚ್ಚಿನ ತೊಂದರೆಗಳನ್ನು ತಪ್ಪಿಸುತ್ತದೆ. ಆಸ್ಪತ್ರೆ ಹಾಗೂ ಸಾಂಸ್ಥಿಕವಾಗಿ ಬಳಸಲು ವೈದ್ಯಕೀಯ ತಜ್ಞರ ಪ್ರಿಸ್ಕ್ರಿಪ್ಷನ್ ವಿರಾಫಿನ್‌ಗೆ ಅಗತ್ಯವಾಗಿದೆ.
ಭಾರತದಾದ್ಯಂತ 20-25 ಕೇಂದ್ರಗಳಲ್ಲಿ ನಡೆಸಿದ ಪ್ರಯೋಗದಲ್ಲಿ ವಿರಾಫಿನ್ ಪೂರಕ ಆಮ್ಲಜನಕದ ಅಗತ್ಯವನ್ನು ಕಡಿಮೆ ತೋರಿಸಿದೆ. ಇದು ಉಸಿರಾಟದ ತೊಂದರೆ ಮತ್ತು ವೈಫಲ್ಯವನ್ನು ನಿಯಂತ್ರಿಸಲು ಸಮರ್ಥವಾಗಿದೆ ಎಂದು ಸ್ಪಷ್ಟವಾಗಿ ಸೂಚಿಸುತ್ತದೆ. ಕೋವಿಡ್-19 ಚಿಕಿತ್ಸೆಯಲ್ಲಿ ಪ್ರಮುಖ ಸವಾಲುಗಳಲ್ಲಿ ಉಸಿರಾಟ ಸಮಸ್ಯೆ ಮುಖ್ಯವಾಗಿದೆ.
ಈ ಕುರಿತು ಮಾತನಾಡಿದ ಕ್ಯಾಡಿಲಾ ಹೆಲ್ತ್‌ಕೇರ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಶಾರ್ವಿಲ್ ಪಟೇಲ್, ನಾವು ಚಿಕಿತ್ಸೆ ನೀಡಲು ಸಮರ್ಥರಾಗಿದ್ದೇವೆ. ಈ ಔಷಧಿ ವೈರಲ್ ಲೋಡ್ ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.
ಉತ್ತಮ ರೋಗ ನಿರ್ವಹಣೆಗೆ ಸಹಾಯ ಮಾಡುತ್ತದೆ. ಕೋವಿಡ್-19 ವಿರುದ್ಧದ ಈ ಯುದ್ಧದಲ್ಲಿ ನಾವು ಸೋಂಕಿತರಿಗೆ ನಿರ್ಣಾಯಕ ಚಿಕಿತ್ಸೆ ಒದಗಿಸುತ್ತೇವೆ ಎಂದಿದ್ದಾರೆ.
ಝೈಡಸ್ ಕ್ಯಾಡಿಲಾ ಶುಕ್ರವಾರ ಅಮೆರಿಕ ಆರೋಗ್ಯ ನಿಯಂತ್ರಕದಿಂದ ಆಂಟಿ-ಆರ್ಹೆತ್ಮಮಿಕ್ ಔಷಧ ಪ್ರೊಪಾಫೆನೋನ್ ಹೈಡ್ರೋಕ್ಲೋರೈಡ್ ಮಾತ್ರೆಗಳನ್ನು ಮಾರುಕಟ್ಟೆಗೆ ತರಲು ಅಂತಿಮ ಅನುಮೋದನೆ ಪಡೆದಿದೆ ಎಂದಿದೆ.
ಪ್ರೊಪಾಫೆನೋನ್ ಆಂಟಿ-ಆರ್ಹೆತ್ಮಮಿಕ್ ಔಷಧ ಎಂದು ಕರೆಯಲಾಗುತ್ತದೆ. ಅನಿಯಮಿತ ಹೃದಯ ಬಡಿತಕ್ಕೆ ಕಾರಣವಾಗುವ ಹೃದಯದಲ್ಲಿನ ಕೆಲವು ವಿದ್ಯುತ್ ಸಂಕೇತಗಳ ಚಟುವಟಿಕೆ ನಿರ್ಬಂಧಿಸುವ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. 225 ಎಂಜಿ, 325 ಎಂಜಿ ಮತ್ತು 425 ಎಂಜಿ ಸಾಮರ್ಥ್ಯದಲ್ಲಿ ಪ್ರಾಪಾಫೆನೋನ್ ಹೈಡ್ರೋಕ್ಲೋರೈಡ್ ಮಾತ್ರೆಗಳಿವೆ.