ಮುಂಬೈ: ಜಿಯೋ ಪ್ಲಾಟ್‌ಫಾರ್ಮ್ ಜತೆಗೂಡಿ ಕಡಿಮೆ ಬೆಲೆಯ ಸ್ಮಾರ್ಟ್‌ಫೋನ್‌ಗಳನ್ನು ತಯಾರಿಸುವ ಯೋಜನೆಯು ಪ್ರಗತಿಯಲ್ಲಿದೆ ಎಂದು ಟೆಕ್ ದೈತ್ಯ ಗೂಗಲ್ ಸಿಇಒ ಸುಂದರ್ ಪಿಚೈ ಹೇಳಿದ್ದಾರೆ.
ವರ್ಚುಯಲ್ ಕಾನ್ಫರೆನ್ಸ್ ಮೂಲಕ ಏಷ್ಯಾ-ಪೆಸಿಫಿಕ್ ಪ್ರದೇಶದ ಕೆಲವು ವರದಿಗಾರರೊಂದಿಗೆ ಮಾತನಾಡಿದ ಅವರು, ನಾವು ಸ್ಮಾರ್ಟ್‌ಫೋನ್ ಅನ್ನು ಕೈಗೆಟುಕುವ ಕಡಿಮ ಬೆಲೆಯಲ್ಲಿ ತಯಾರಿಸುವುದರತ್ತ ಗಮನ ಹರಿಸಿದ್ದೇವೆ. ನಾವು ಈ ಯೋಜನೆಯನ್ನು ತ್ವರಿತವಾಗಿ ಪೂರ್ಣಗೊಳಿಸಲು ಪ್ರಯತ್ನಿಸುತ್ತಿದ್ದೇವೆ. ಇದಕ್ಕಾಗಿ ನಾವು ನಮ್ಮ ಪಾಲುದಾರ ಜಿಯೋ ಅವರೊಂದಿಗೆ ಕೆಲಸ ಮಾಡುತ್ತಿದ್ದೇವೆ ಎಂದು ವಿವರಿಸಿದರು.
ಸ್ಮಾರ್ಟ್‌ಫೋನ್ ಯಾವಾಗ ಬಿಡುಗಡೆಯಾಗುತ್ತದೆ? ಅದರ ಬೆಲೆ? ಡೇಟಾ ದರಗಳಂತಹ ಇತರ ವಿವರಗಳನ್ನು ಪಿಚೈ ಬಹಿರಂಗಪಡಿಸಲಿಲ್ಲ. ಗೂಗಲ್ ರಿಲಯನ್ಸ್ ಇಂಡಸ್ಟ್ರೀಸ್ ಜಿಯೋ ಪ್ಲಾಟ್‌ಫಾರ್ಮ್‌ನಲ್ಲಿ ಹೆಚ್ಚು ಹೂಡಿಕೆ ಮಾಡಿದೆ ಎಂಬುದು ತಿಳಿದಿರುವ ಸತ್ಯ.
ಗೂಗಲ್ ಜಿಯೋದಲ್ಲಿ ಶೇ 7.7ರಷ್ಟು ಪಾಲನ್ನು 33,737 ಕೋಟಿ ರೂ.ಕೊಟ್ಟು ಪಡೆದಿದೆ. ಅದೇ ಸಮಯದಲ್ಲಿ ಜಿಯೋ ಜೊತೆ ಕಡಿಮೆ ಬೆಲೆಯ ಆರಂಭಿಕ ಮಟ್ಟದ ಸ್ಮಾರ್ಟ್‌ಫೋನ್ ತಯಾರಿಸುವುದಾಗಿ ಉಭಯ ಕಂಪನಿಗಳು ಜಂಟಿಯಾಗಿ ಘೋಷಿಸಿವೆ.
ಮುಂದಿನ 5ರಿಂದ 7 ವರ್ಷಗಳಲ್ಲಿ 'ಗೂಗಲ್ ಫಾರ್ ಇಂಡಿಯಾ ಡಿಜಿಟೈಸೇಷನ್ ಫಂಡ್' ಹೆಸರಿನಲ್ಲಿ ಭಾರತದಲ್ಲಿ 10 ಬಿಲಿಯನ್ ಡಾಲರ್ (75,000 ಕೋಟಿ ರೂ.) ಹೂಡಿಕೆ ಮಾಡುವುದಾಗಿ ಪಿಚೈ ಕಳೆದ ಜುಲೈನಲ್ಲಿ ಘೋಷಿಸಿದ್ದರು. ಇದರ ಭಾಗವಾಗಿ ಗೂಗಲ್ ಜಿಯೋದಲ್ಲಿ ಪಾಲನ್ನು ಖರೀದಿಸಿತು. ಶೀಘ್ರದಲ್ಲೇ ಹೆಚ್ಚಿನ ಯೋಜನೆಗಳನ್ನು ಕೈಗೊಳ್ಳಲಾಗುವುದು ಎಂದು ಪಿಚೈ ಬಹಿರಂಗಪಡಿಸಿದರು.