ಬೆಂಗಳೂರು: ಕಳೆದ ಕೆಲವು ವರ್ಷಗಳಿಂದ ಮಾಡಿದ ಹೂಡಿಕೆಗಳು ಕಂಪನಿಯನ್ನು ಉತ್ತಮ ಸ್ಥಾನದಲ್ಲಿರಿಸಿವೆ ಎಂದು ಸಿಲಿಕಾನ್ ಸಿಟಿಯ ಟೆಕ್ ದೈತ್ಯ ಇನ್ಫೋಸಿಸ್ ತನ್ನ ಷೇರು ಹೂಡಿಕೆದಾರರಿಗೆ ತಿಳಿಸಿದೆ.
ಕಂಪನಿಯ ವಾರ್ಷಿಕ ಸಭೆಯಲ್ಲಿ ಮಾತನಾಡಿದ ಇನ್ಫೋಸಿಸ್ ಅಧ್ಯಕ್ಷ ನಂದನ್ ನಿಲೇಕಣಿ, ಕಳೆದ ಕೆಲವು ವರ್ಷಗಳಿಂದ ನಾವು ಇನ್ಫೋಸಿಸ್ ಕಂಪನಿಯನ್ನು ಬಲಿಷ್ಠ ಮತ್ತು ಹೆಚ್ಚು ಸುಧಾರಣೆ ತರುವ ಭಾಗವಾಗಿ ಎಲ್ಲದರಲ್ಲೂ ಚುರುಕುತನ ಮತ್ತು ವೇಗದ ಹೂಡಿಕೆ ಮಾಡಿದ್ದೇವೆ. ಇವುಗಳು ನಮ್ಮ ಸಂಸ್ಥಯನ್ನು ಸದೃಢವಾಗಿ ಇರಿಸಿವೆ ಎಂದರು.
ಕೋವಿಡ್-19 ಸಾಂಕ್ರಾಮಿಕ ರೋಗದ ಮಧ್ಯೆಯೂ ಹೂಡಿಕೆಗಳು ನಮ್ಮನ್ನು ಉತ್ತಮವಾಗಿ ಇರಿಸಿವೆ. ಅಸಾಧಾರಣವಾದ ಸಾಂಕ್ರಾಮಿಕವು ಪ್ರತಿ ದೇಶ, ವ್ಯವಹಾರ ಮತ್ತು ವ್ಯಕ್ತಿಗಳ ಮೇಲೆ ಪರಿಣಾಮ ಬೀರಿದೆ. ಕಂಪನಿಯು ತನ್ನ ಮಾಪನ, ಬ್ರ್ಯಾಂಡ್ ಮತ್ತು ತ್ವರಿತ ಪ್ರತಿಕ್ರಿಯೆ ಹಾಗೂ ಚುರುಕುತನದ ಸಂಯೋಜನೆಯ ಮೂಲಕ ಜಾಗತಿಕ ಬಿಕ್ಕಟ್ಟಿನಿಂದ ಹೊರ ಬಂದಿದೆ ಎಂದು ಹೂಡಿಕೆದಾರರಿಗೆ ತಿಳಿಸಿದರು.