ಮುಂಬೈ: ಬಹುಕೋಟಿ ಯೆಸ್ ಬ್ಯಾಂಕ್ ವಂಚನೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಅಕ್ರಮ ಹಣ ವರ್ಗಾವಣೆ ಆರೋಪ ಹೊತ್ತಿರುವ ದಿವಾನ್ ಹೌಸಿಂಗ್ ಫೈನಾನ್ಸ್ ಕಾರ್ಪೊರೇಷನ್ ಲಿಮಿಟೆಡ್ ಪ್ರವರ್ತಕರಾದ ಕಪಿಲ್ ವಾಧವನ್ ಮತ್ತು ಧೀರಜ್ ವಾಧವನ್ ಅವರಿಗೆ ಬಾಂಬೆ ಹೈಕೋರ್ಟ್ ಗುರುವಾರ ಜಾಮೀನು ನೀಡಿದೆ.
ನಿಗದಿತ 60 ದಿನಗಳ ಅವಧಿಯಲ್ಲಿ ಈ ಪ್ರಕರಣದಲ್ಲಿ ಇಡಿ ಆಪಾಧಿತರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಲು ವಿಫಲವಾದ ಕಾರಣ ನ್ಯಾಯಮೂರ್ತಿ ಭಾರತಿ ದಂಗ್ರೆ ಅವರು ಜಾಮೀನು ನೀಡಿದ್ದಾರೆ.
ತಲಾ ಒಂದು ಲಕ್ಷ ರೂ. ಜಾಮೀನು ರೂಪದಲ್ಲಿ ಜಮಾ ಮಾಡಿ, ಅವರ ಪಾಸ್‌ಪೋರ್ಟ್‌ಗಳನ್ನು ಒಪ್ಪಿಸುವಂತೆ ನ್ಯಾಯಾಲಯ ಇಬ್ಬರಿಗೂ ನಿರ್ದೇಶನ ನೀಡಿದೆ.
ಇದೇ ಪ್ರಕರಣದಲ್ಲಿ ಕೇಂದ್ರೀಯ ತನಿಖಾ ತಂಡ (ಸಿಬಿಐ) ಕೇಸ್ ದಾಖಲಿಸಿದ್ದರಿಂದ ಇಬ್ಬರೂ ಸಹೋದರರು ಜೈಲಿನಲ್ಲಿಯೇ ಇರುತ್ತಾರೆ. 60 ದಿನಗಳ ನಿಗದಿತ ಅವಧಿಯಲ್ಲಿ ಇಡಿ ತನ್ನ ಚಾರ್ಜ್‌ಶೀಟ್ ಸಲ್ಲಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಗಳು ಜಾಮೀನು ಅರ್ಜಿಯಲ್ಲಿ ಕೋರಿದ್ದರು. ಮನಿ ಲಾಂಡರಿಂಗ್ ಆರೋಪದ ಮೇಲೆ ಸಹೋದರರನ್ನು ಮೇ 14ರಂದು ಇಡಿ ಬಂಧಿಸಿತ್ತು.
ಜುಲೈ 15ರಂದು ವಾಧವನ್ಸ್, ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್, ಅವರ ಪತ್ನಿ ಬಿಂದು ಕಪೂರ್, ಪುತ್ರಿಯರಾದ ರೋಶ್ನಿ ಮತ್ತು ರೇಖಾ ಹಾಗೂ ಅವರ ಚಾರ್ಟರ್ಡ್ ಅಕೌಂಟೆಂಟ್ ಸಂಸ್ಥೆಯ ದುಲರೇಶ್ ಕೆ.ಜೈನ್ ಮತ್ತು ಅವನ ಸಹಾಯಕನ ವಿರುದ್ಧ ಇಡಿ ತನ್ನ ಚಾರ್ಜ್‌ಶೀಟ್ ದಾಖಲಿಸಿತ್ತು.