ಮುಂಬೈ: ಭಾರತದ ದೂರ ಸಂಪರ್ಕ ಮಾರುಕಟ್ಟೆಯಲ್ಲಿ ಡೇಟಾ ಹಾಗೂ ಕರೆ ದರ ಸಮರದಿಂದ ದೇಶಿ ಟೆಲಿಕಾಂ ಕಂಪನಿಗಳು ನಿಧಾನಕ್ಕೆ ಚೇತರಿಸಕೊಳ್ಳುತ್ತಿದ್ದು, ಮೂರು ವರ್ಷಗಳ ಬಳಿಕ ಲಾಭದತ್ತ ಮುಖಮಾಡಿವೆ.
ಮಾರ್ಚ್ಗೆ ಕೊನೆಗೊಂಡ ಮೂರು ತಿಂಗಳ ವೊಡಾಫೋನ್- ಐಡಿಯಾ (ವಿಐಎಲ್) ಮತ್ತು ಭಾರ್ತಿ ಏರ್ಟೆಲ್ ಮೊಬೈಲ್ ಸೇವಾ ಆದಾಯ 11ನೇ ತ್ರೈಮಾಸಿಕದ ಬಳಿಕ ಮೊದಲ ಬಾರಿಗೆ ಆದಾಯ ಹೆಚ್ಚಳವಾಗಿದೆ.
ಸೇವಾದಾರರಿಗೆ ಕನಿಷ್ಠ ಬೆಲೆಯ ರಿಚಾರ್ಜ್, ಹೆಚ್ಚಿನ ಬಳಕೆಯ ಡೇಟಾ ಪ್ಯಾಕೇಜ್, ಧ್ವನಿ ಕರೆಯಂತಹ ಆಕರ್ಷಕ ಸೇವೆಗಳು ವೋಡಾಫೋನ್- ಐಡಿಯಾ, ಭಾರ್ತಿ ಏರ್ಟೆಲ್ ಹಾಗೂ ರಿಲಯನ್ಸ್ ಜಿಯೋ ಇನ್ಫೋಕಾಮ್ ಕಂಪನಿಗಳನ್ನು ಹೈರಾಣಾಗಿಸಿದ್ದವು.
2016ರಲ್ಲಿ ಮುಕೇಶ್ ಅಂಬಾನಿ ಒಡೆತನದ ರಿಲಯನ್ಸ್ ಜಿಯೋ ಟೆಲಿಕಾಂ ಇಂಡಸ್ಟ್ರಿಗೆ ಪಾದಾರ್ಪಣೆ ಮಾಡುತ್ತಿದ್ದಂತೆ ದರ ಸಮರ ತಾರಕಕ್ಕೆ ಏರಿತು. ಜೊತೆಗೆ ಎದುರಾಳಿ ಕಂಪನಿಗಳು ತಮ್ಮ ಗ್ರಾಹಕರನ್ನು ಕಳೆದುಕೊಂಡರು. ಜಿಯೋ ಸೆಡ್ಡು ಹೊಡೆಯಲು ಅಗ್ಗದ ಡೇಟಾ ಮತ್ತು ಕರೆ ಯೋಜನಾ ಸೇವೆ ನೀಡಿದವು. ಇದು ಕಂಪನಿಗಳ ನಿವ್ವಳ ಲಾಭದ ಮೇಲೆ ನೇರ ಪರಿಣಾಮ ಬೀರಿ ತಮ್ಮ ಅಸ್ತಿತ್ವಕ್ಕಾಗಿ ಕೆಲವು ವಿಲೀನದ ಮೊರೆ ಹೋದವು.
ಸಿಮ್ ಸೇವೆ ಮುಂದುವರಿಸುವ ಕನಿಷ್ಠ ಪುನರ್ಭರ್ತಿ ಪಾವತಿ ಯೋಜನೆ, ಸುಂಕದಲ್ಲಿನ ಸ್ಥಿರತೆ ಹಾಗೂ ಸುಧಾರಿತ ಹಣಗಳಿಕೆ ಮಾರ್ಗಗಳು ಏರ್ಟೆಲ್ ಹಾಗೂ ವಿಐಎಲ್ ಅನ್ನು ಮರಳಿ ಲಾಭದ ಹಳಿ ಮೇಲೆ ಸಾಗಲು ನೆರವಾಗಿವೆ. ಏರ್ಟೆಲ್ನ ನಾಲ್ಕನೇ ತ್ರೈಮಾಸಿಕ ಆದಾಯದ ಪ್ರಮಾಣ ಶೇ.4ರಷ್ಟು ಏರಿಕೆ ಆಗಲಿದೆ. ವಿಐಎಲ್ ಮೊಬೈಲ್ನದ್ದು ಶೇ.1ರಷ್ಟು ವೃದ್ಧಿಸಲಿದೆ ಎಂದು ಮಾರುಕಟ್ಟೆ ತಜ್ಞರು 3 ತಿಂಗಳ ಹಿಂದಿನ ಆದಾಯದ ಆಧಾರದ ಮೇಲೆ ವಿಶ್ಲೇಷಿಸಿದ್ದಾರೆ.