ನವದೆಹಲಿ:ಪ್ರಾದೇಶಿಕ ವಿಮಾನಯಾನ ಹಾರಾಟಕ್ಕೆ ಉತ್ತೇಜನ ನೀಡಲು ಆರಂಭಿಸಲಾದ ಉಡಾನ್ (ಉಡೇ ದೇಶ್ ಕಾ ಆಮ್ ನಾಗರಿಕ್) ಯೋಜನೆಯಡಿ ಮತ್ತೆ 8 ನೂತನ ಮಾರ್ಗಗಳು ಆರಂಭಗೊಂಡಿವೆ.
ಕೇಂದ್ರ ಸರ್ಕಾರ ಜನಸಾಮಾನ್ಯರು ಕೂಡ ಕಡಿಮೆ ಶುಲ್ಕದಲ್ಲಿ ವಿಮಾನ ಸೇವೆ ಪಡೆಯಬೇಕು ಎಂಬ ಆಶಯದಿಂದ 'ಉಡಾನ್' ಯೋಜನೆಯನ್ನು 2016ರ ಅಕ್ಟೋಬರ್ 21ರಂದು ಜಾರಿಗೆ ತಂದಿತ್ತು.
ಮೈಸೂರಿನಿಂದ ಹೈದರಾಬಾದ್, ಹೈದರಾಬಾದ್ನಿಂದ ಮೈಸೂರು, ಗೋವಾದಿಂದ ಮೈಸೂರು, ಮೈಸೂರಿನಿಂದ ಗೋವಾ, ಕೊಚ್ಚಿಯಿಂದ ಮೈಸೂರು, ಮೈಸೂರಿನಿಂದ ಕೊಚ್ಚಿ, ಶಿಲ್ಲಾಂಗ್ನಿಂದ ಕೋಲ್ಕತಾ ಮತ್ತು ಕೋಲ್ಕತ್ತಾದಿಂದ ಶಿಲ್ಲಾಂಗ್ ನಡುವೆ ಸಂಚಾರ ಈಗಾಗಲೇ ಆರಂಭಗೊಂಡಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದೆ.
ಕೆಲ ದಿನಗಳ ಹಿಂದಷ್ಟೆ, ಉಡಾನ್ ಕಾರ್ಯಾಚರಣೆಯಲ್ಲಿ ಹೊಸದಾಗಿ 12 ಮಾರ್ಗಗಳನ್ನು ಹೆಚ್ಚಿಸಲಾಗಿದೆ ಎಂದು ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿತ್ತು. ಈಗ ಮತ್ತೆ 8 ಹೊಸ ಮಾರ್ಗಗಳ ಆರಂಭಕ್ಕೆ ಗ್ರೀನ್ ಸಿಗ್ನಲ್ ನೀಡಿದೆ.
ದೇಶಾದ್ಯಂತ ಪ್ರಸ್ತುತ ವಿಮಾನ ಸಂಚಾರವಾಗುತ್ತಿರುವ ಉಡಾನ್ ಯೋಜನೆ ಮಾರ್ಗಗಳ ಸಂಖ್ಯೆ 194ಕ್ಕೆ ಏರಿಕೆಯಾಗಿದೆ. ನಾಗರಿಕ ವಿಮಾನಯಾನ ನಿರ್ದೇಶನಾಲಯ ದೇಶಾದ್ಯಂತ ಒಟ್ಟು 705 ಮಾರ್ಗಗಳಲ್ಲಿ ವಿಮಾನ ಸಂಚಾರಕ್ಕೆ ಒಪ್ಪಿಗೆ ನೀಡಿದೆ.