ನವದೆಹಲಿ: ಯುವಕರ ಹಾಗೂ ಆಂಟಿಯರ ನೆಚ್ಚಿನ ಕಿರಿ ವಿಡಿಯೋ ಆ್ಯಪ್ ಟಿಕ್ಟಾಕ್ ನಿಷೇಧದ ಬಳಿಕ ಚೀನಾದ ಬೈಟ್ ಡ್ಯಾನ್ಸ್ ಭಾರತದಲ್ಲಿನ ತನ್ನ ವ್ಯವಹಾರದ ಬಾಗಿಲು ಮುಚ್ಚಿದೆ.
ಟಿಕ್ಟಾಕ್ ಮತ್ತು ಹೆಲೋ ಆ್ಯಪ್ ಹೊಂದಿರುವ ಚೀನಾದ ಸಾಮಾಜಿಕ ಮಾಧ್ಯಮ ಸಂಸ್ಥೆ ಬೈಟ್ಡ್ಯಾನ್ಸ್, ದೇಶದಲ್ಲಿ ತನ್ನ ಸೇವೆಗಳ ಮೇಲೆ ನಿರಂತರ ನಿರ್ಬಂಧಗಳು ಬಂದಿದ್ದರಿಂದ ಭಾರತದಲ್ಲಿನ ವ್ಯವಹಾರವನ್ನು ಮುಚ್ಚುವುದಾಗಿ ಘೋಷಿಸಿದೆ.
ಟಿಕ್ಟಾಕ್ನ ಮಧ್ಯಂತರ ಅವಧಿಯ ಗ್ಲೋಬಲ್ ಮುಖ್ಯಸ್ಥ ವನೆಸ್ಸಾ ಪಪ್ಪಾಸ್ ಮತ್ತು ಉಪಾಧ್ಯಕ್ಷ ಬ್ಲೇಕ್ ಚಾಂಡ್ಲೀ ಅವರು ಜಂಟಿ ಇಮೇಲ್ನಲ್ಲಿ ಉದ್ಯೋಗಿಗಳಿಗೆ ಕಂಪನಿಯ ನಿರ್ಧಾರ ತಿಳಿಸಿದ್ದಾರೆ. ನಮ್ಮ ನಿರ್ಧಾರದಿಂದ ಉದ್ಯೋಗಿಗಳ ಸಂಖ್ಯೆ ತಗ್ಗಲಿದೆ ಮತ್ತು ಭಾರತದಲ್ಲಿನ ಎಲ್ಲ ಉದ್ಯೋಗಿಗಳ ಮೇಲೆ ಪರಿಣಾಮ ಬೀರುತ್ತದೆ ಎಂದಿದ್ದಾರೆ.
ಕಂಪನಿಯು ಭಾರತಕ್ಕೆ ಪುನರಾಗಮನದ ಬಗ್ಗೆ ಕಾರ್ಯನಿರ್ವಾಹಕರು ಅನಿಶ್ಚಿತತೆ ವ್ಯಕ್ತಪಡಿಸಿದ್ದು, ಮುಂದಿನ ದಿನಗಳಲ್ಲಿ ಕಾಲ ಕೂಡಿ ಬಂದರೆ ಮತ್ತೆ ಹಿಂದಿರುಗುವ ಭರವಸೆ ಇರಿಸಿಕೊಂಡಿದ್ದಾರೆ.
ನಾವು ಭಾರತದಲ್ಲಿ ಯಾವಾಗ ಪುನರಾಗಮನ ಮಾಡುತ್ತೇವೆ ಎಂಬುದು ನಮಗೆ ತಿಳಿದಿಲ್ಲ. ಆದರೂ ನಮ್ಮ ಸ್ಥಿರತೆ ಮೇಲೆ ನಮಗೆ ವಿಶ್ವಾಸವಿದೆ. ಮುಂದಿನ ದಿನಗಳಲ್ಲಿ ಹಾಗೆ ಮಾಡಲು ನಾವು ಬಯಸುತ್ತೇವೆ ಎಂದು ಇಮೇಲ್ನಲ್ಲಿ ಹೇಳಿದೆ.