ನವದೆಹಲಿ:ಭಾರತದ ಸಾಫ್ಟ್ವೇರ್ ದೈತ್ಯ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ನ (ಟಿಸಿಎಸ್) ಷೇರು ಮೌಲ್ಯ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿದ್ದು, ಮಾರುಕಟ್ಟೆಯ ಬಂಡವಾಳ ಮೌಲ್ಯ 11 ಲಕ್ಷ ಕೋಟಿ ರೂ. ದಾಟಿದೆ.
ಮಧ್ಯಂತರ ವಹಿವಾಟಿನಂದು ಷೇರು ದರ ಶೇ 1ಕ್ಕಿಂತ ಅಧಿಕ ಏರಿಕೆಯಾದ ನಂತರ ಟಿಸಿಎಸ್ ಷೇರು ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟ ಮುಟ್ಟಿತು. ಐಟಿ ಷೇರು ಮೊದಲ ಬಾರಿಗೆ 11 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೊತ್ತದ ಮಾರುಕಟ್ಟೆ ಬಂಡವಾಳ ಹೊಂದಿದ್ದು, ಪ್ರತಿ ಷೇರಿನ ಮೇಲೆ ಶೇ 1.42ರಷ್ಟು ದರ ಏರಿಕೆಯಿಂದ 2,949.40 ರೂ.ಗೆ ತಲುಪಿದೆ. ಒಟ್ಟಾರೆ ಮಾರುಕಟ್ಟೆ ಬಂಡವಾಳ 11.02 ಲಕ್ಷ ಕೋಟಿ ರೂ. ದಾಟಿದೆ.
ದಿನದ ಅಂತ್ಯದಲ್ಲಿ ಷೇರು ಮೌಲ್ಯ ಶೇ 0.68ರಷ್ಟು ಅಥವಾ 19.80 ರೂ. ಹೆಚ್ಚಳವಾಗಿ 2,928 ರೂ.ಗೆ ಸ್ಥಿರವಾಯಿತು. ಕಳೆದ 4 ದಿನಗಳಲ್ಲಿ ಷೇರು ಮೌಲ್ಯ ಶೇ 4ರಷ್ಟು ಗಳಿಕೆ ಕಂಡಿದೆ. ಟಿಸಿಎಸ್ ಷೇರು ವಹಿವಾಟಿನ 5 ದಿನ, 20 ದಿನ, 50 ದಿನ, 100 ದಿನ ಮತ್ತು 200 ದಿನಗಳ ಸರಾಸರಿಗಿಂತ ಈ ನಾಲ್ಕು ದಿನಗಳಲ್ಲಿ ವೇಗವಾಗಿ ಏರಿಕೆ ಕಂಡಿದೆ. ಪೇಟೆಯ ಅತಿದೊಡ್ಡ ಬಂಡವಾಳ ಸ್ಟಾಕ್ ಟಿಸಿಎಸ್, ಈ ಒಂದು ವರ್ಷದಲ್ಲಿ ಶೇ 33.29ರಷ್ಟು ಗಳಿಕೆ ಕಂಡಿದೆ. ವರ್ಷದ ಆರಂಭದಿಂದ ಶೇ 35.56ರಷ್ಟು ಏರಿಕೆಯಾಗಿ, ಒಂದು ತಿಂಗಳಲ್ಲಿ ಷೇರು ದರ ಶೇ 9.36ರಷ್ಟು ಹೆಚ್ಚಳವಾಗಿದೆ.