ಬೆಂಗಳೂರು:ಕಳೆದ ಹಣಕಾಸು ವರ್ಷದಲ್ಲಿ ದೇಶದ ವಿವಿಧ ವಲಯಗಳ ನಿಧಾನಗತಿಯ ಬೆಳವಣಿಗೆಯಿಂದ ಉದ್ಯೋಗ ನೇಮಕಾತಿಯ ಪ್ರಮಾಣ ಇಳಿಕೆಯಾಗಿತ್ತು. ಲಕ್ಷಾಂತರ ಎಂಜಿನಿಯರಿಂಗ್ ಪದವೀಧರರು ಟಾಪ್ ಕಂಪನಿಗಳ ಕದ ತಟ್ಟಲು ತುದಿಗಾಲಲ್ಲಿ ಕಾಯುತ್ತಿದ್ದರು. ಈಗ ಟಿಸಿಎಸ್ ಹಾಗೂ ಇನ್ಫೋಸಿಸ್ ಆ ಹಾದಿಯನ್ನು ಸುಗಮಗೊಳಿಸುತ್ತಿವೆ.
ಕಳೆದ ಆರ್ಥಿಕ ವರ್ಷಾಂತ್ಯದ ಮಾರ್ಚ್ 31ರಲ್ಲಿ ಟಿಸಿಎಸ್ನ ಮುಂಬೈ ಕೇಂದ್ರ ಕಚೇರಿಯು 29,287 ಉದ್ಯೋಗಿಗಳ ನೇಮಕಕ್ಕೆ ಆದೇಶ ಹೊರಡಿಸಿದ್ದರೇ, ಬೆಂಗಳೂರು ಮೂಲದ ಇನ್ಫೋಸಿಸ್ 24,016 ಎಂಜಿನಿಯರ್ಗಳ ನೇಮಕಕ್ಕೆ ಮುಂದಾಗಿದೆ.
2018ರ ಹಣಕಾಸು ವರ್ಷದಲ್ಲಿ ಉಭಯ ಸಂಸ್ಥೆಗಳು 53,303 ಉದ್ಯೋಗಿಗಳನ್ನು ನೇಮಿಸಿಕೊಂಡಿದ್ದರೇ, 2017-18ರ ಸಾಲಿನಲ್ಲಿ ಕೇವಲ 11,500 ನೌಕರರಿಗೆ ಕೆಲಸ ನೀಡಿದ್ದವು. 2018ರ ಆರ್ಥಿಕ ವರ್ಷದಲ್ಲಿ ಟಿಸಿಎಸ್ 7,775 ಹಾಗೂ ಇನ್ಫೋಸಿಸ್ 3,746 ಉದ್ಯೋಗಿಗಳನ್ನು ಹೈರ್ ಮಾಡಿಕೊಂಡಿತ್ತು ಎಂದು ಫಾರ್ಚ್ಯುನ್ ವರದಿ ತಿಳಿಸಿದೆ.
ದೇಶದ 167 ಬಿಲಿಯನ್ ಡಾಲರ್ ಮೌಲ್ಯದ ಐಟಿ ಸೇವಾ ಉದ್ಯಮ, ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳ ನೇಮಕಕ್ಕೆ ಮುಂದಾಗಿದ್ದು ಉತ್ತಮ ಬೆಳವಣಿಗೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ಮೂಲಕ ನಿರುದ್ಯೋಗ ನಿರ್ಮೂಲನೆಯಲ್ಲೂ ಇದು ಮಹತ್ವದ ಪಾತ್ರವಹಿಸಲಿದೆ.
ಭಾರತೀಯ ಐಟಿ ಇಂಡಸ್ಟ್ರಿ ಈ ವರ್ಷ ಹೊಸದಾಗಿ 2.5 ಲಕ್ಷ ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿದೆ. ಮುಖ್ಯವಾಗಿ ಡಾಟಾ ಸೈನ್ಸ್, ಡಾಟಾ ಅನಾಲಿಸಿಸ್, ಸಲ್ಯೂಷನ್ ಆರ್ಕಿಟೆಕ್ಸ್, ಉತ್ಪನ್ನ ನಿರ್ವಹಣೆ, ಡಿಜಿಟಲ್ ಮಾರ್ಕೆಟಿಂಗ್, ಮಷಿನ್ ಲರ್ನಿಂಗ್ ಮತ್ತು ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ (ಎಐ), ಬ್ಲಾಕ್ಚೈನ್ ಮತ್ತು ಸೈಬರ್ ಭದ್ರತೆಯಲ್ಲಿ ಜನರು ಕೆಲಸ ಪಡೆಯಲಿದ್ದಾರೆ ಎಂದು ಅಂದಾಜಿಸಲಾಗುತ್ತಿದೆ.