ನವದೆಹಲಿ: ಅಕ್ಟೋಬರ್ ತಿಂಗಳಲ್ಲಿ ಟಾಟಾ ಮೋಟಾರ್ಸ್ ವಾಹನಗಳ ಮಾರಾಟ ಶೇ 33.58ರಷ್ಟು ಕುಸಿದಿದ್ದು, 41,354 ಯೂನಿಟ್ಗಳು ಮಾರಾಟ ಆಗಿವೆ ಎಂದು ಕಂಪನಿ ತಿಳಿಸಿದೆ.
ಟಾಟಾ ಮೋಟಾರ್ಸ್ ಕಳೆದ ವರ್ಷ ಇದೇ ತಿಂಗಳಲ್ಲಿ 62,264 ಯೂನಿಟ್ಗಳನ್ನು ಮಾರಾಟ ಮಾಡಿತ್ತು. ಒಟ್ಟು ದೇಶಿಯ ವಾಹನಗಳ ಮಾರಾಟ ಶೇ 32ರಷ್ಟು ಕುಸಿದು 39,152 ಯೂನಿಟ್ಗಳು ಖರೀದಿ ಆಗಿವೆ. ಕಳೆದ ವರ್ಷದ ಅಕ್ಟೋಬರ್‌ನಲ್ಲಿ 57,710 ವಾಹನಗಳು ಮಾರಾಟ ಆಗಿದ್ದವು ಎಂದಿದೆ.
ದೇಶಿಯ ಮಾರುಕಟ್ಟೆಯಲ್ಲಿ ಪ್ರಯಾಣಿಕರ ವಾಹನಗಳ ಮಾರಾಟವು 13,169 ಯುನಿಟ್ ಆಗಿದ್ದು, ಕಳೆದ ವರ್ಷದ ಅಕ್ಟೋಬರ್‌ನಲ್ಲಿ 18,290 ಯುನಿಟ್ ಮಾರಾಟವಾಗಿ ಶೇ 28ರಷ್ಟು ಕುಸಿದಿದೆ. ವಾಣಿಜ್ಯ ವಾಹನಗಳ ಮಾರಾಟ ಶೇ 34 ರಷ್ಟು ಕುಸಿದಿದ್ದು, 25,983 ಯೂನಿಟ್ಗಳು ಖರೀದಿ ಆಗಿವೆ. ಕಳೆದ ವರ್ಷ ಇದೇ ಅವಧಿಯಲ್ಲಿ 39,420 ಯೂನಿಟ್ಗಳು ಮಾರಾಟ ಆಗಿದ್ದವು.
ಪ್ರಸಕ್ತ ಆರ್ಥಿಕ ವರ್ಷದಲ್ಲಿ ನೆಟ್‌ವರ್ಕ್ ಸ್ಟಾಕ್ ಅನ್ನು ಶೇ 38ರಷ್ಟು ಕಡಿಮೆ ಮಾಡಲಾಗಿದೆ. ಕಳೆದ ಎರಡು ವರ್ಷಗಳಲ್ಲಿ ಅಕ್ಟೋಬರ್ ಅಂತ್ಯದಲ್ಲಿ ನೆಟ್‌ವರ್ಕ್ ಸ್ಟಾಕ್ ಅತ್ಯಂತ ಕಡಿಮೆ ಇದೆ. ಇದು ಸುಗಮವಾಗಿ ಬಿಎಸ್- 6ಗೆ ಹೊರಳಲು ಕಂಪನಿಗೆ ನೆರವಾಗಲಿದೆ ಎಂದು ಟಾಟಾ ಮೋಟಾರ್ಸ್ನ ಪ್ಯಾಸೆಂಜರ್ ವೆಹಿಕಲ್ಸ್ನ ವ್ಯವಹಾರಿಕ ಅಧ್ಯಕ್ಷ ಮಯಾಂಕ್ ಪರೇಖ್ ಹೇಳಿದ್ದಾರೆ.