ನವದೆಹಲಿ:ವಿತ್ತ ಸಚಿವ ಅರುಣ್ ಜೇಟ್ಲಿ ಹಾಗೂ ನಾಗರಿಕ ವಿಮಾನಯಾನ ಖಾತೆ ಸಚಿವ ಜಯಂತ್ ಸಿನ್ಹಾ ಬೇಜವಾಬ್ದಾರಿ ನಡೆಗಳಿಂದ ಜೆಟ್ ಏರ್ವೇಸ್ ಸಂಸ್ಥೆ ಅಧೋಗತಿಗೆ ತಲುಪಿದೆ ಎಂದು ಬಿಜೆಪಿಯ ಹಿರಿಯ ಮುಖಂಡ ಸುಬ್ರಮಣಿಯನ್ ಸ್ವಾಮಿ ಆರೋಪಿಸಿದ್ದಾರೆ.
ಬುಧವಾರ ಕೇಂದ್ರ ನಾಗರಿಕ ವಿಮಾನಯಾನ ಖಾತೆ ಸಚಿವ ಸುರೇಶ್ ಪ್ರಭು ಅವರಿಗೆ ಪತ್ರ ಬರೆದಿದ್ದ ಡಾ. ಸುಬ್ರಮಣ್ಯನ್ ಸ್ವಾಮಿ, ಈ ವಿಷಯದ ಕುರಿತು ತಕ್ಷಣವೇ ಗಮನಹರಿಸುವಂತೆ ಒತ್ತಾಯಿಸಿದ್ದಾರೆ.
ಮತ್ತೊಂದು ವಿಮಾನಯಾನ ಸಂಸ್ಥೆಯಾದ ಸ್ಪೈಸ್ ಜೆಟ್ಗೆ ಅನುಕೂಲ ಮಾಡಿಕೊಡಲು ಜೆಟ್ ಏರ್ವೇಸನ್ನು ಮುಳುಗಿಸುವ ಪ್ರಯತ್ನಗಳು ನಡೆಯುತ್ತಿವೆ. ಇದರಿಂದ ಹಿಂದೆ ಸರಿಯುವಂತೆ ಜೇಟ್ಲಿ ಹಾಗೂ ಸಿನ್ಹಾ ಅವರಿಗೆ ಪ್ರಧಾನಿ ಮೋದಿ ಸೂಚಿಸಬೇಕು. ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಮತ್ತೊಬ್ಬರಿಗೆ ಲಾಭ ಮಾಡಿಕೊಡಲು ಹೊರಟಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಟ್ವಿಟ್ಟರ್ನಲ್ಲಿ ಆಪಾದಿಸಿದ್ದಾರೆ.
ಜೆಟ್ ಏರ್ವೇಸ್ನ ನಷ್ಟವನ್ನು ಸ್ಪೈಸ್ಜೆಟ್ ಹಾಗೂ ವಿಸ್ತಾರ ಏರ್ ಲೈನ್ಸ್ ಸಂಸ್ಥೆಗಳಿಗೆ ಲಾಭ ಮಾಡಿಕೊಡುವ ಗಂಭೀರ ಪ್ರಯತ್ನಗಳು ತೆರೆಮರೆಯಲ್ಲಿ ನಡೆಯುತ್ತಿವೆ. ಇದನ್ನು ತಡೆಗಟ್ಟಲು ಜೆಟ್ ಸಂಸ್ಥೆಯನ್ನು ಏರ್ ಇಂಡಿಯಾ ಜೊತೆಗೆ ವಿಲೀನಗೊಳಿಸಬೇಕು ಎಂದು ಸುಬ್ರಮಣಿಯನ್ ಸ್ವಾಮಿ ಸಲಹೆ ನೀಡಿದ್ದಾರೆ.