ಮುಂಬೈ:ಸ್ಪೈಸ್ ಜೆಟ್ ಕಂಪನಿಯು ತನ್ನ ವೈಡ್ ಬಾಡಿ ವಿಮಾನವಾದ ಏರ್ಬಸ್- ಎ 340ಯನ್ನು ಇನ್ನು ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಸರಕು ಸಾಗಾಣಿಕೆಗೆ ಬಳಸಲಾಗುವುದು ಎಂದು ತಿಳಿಸಿದೆ.
ಸ್ಪೈಸ್ ಜೆಟ್ ಎ-340 ವಿಮಾನವನ್ನು ಯುರೋಪ್, ಸಿಐಎಸ್ ಮತ್ತು ಆಫ್ರಿಕಾ ದೇಶದಂತಹ ದೀರ್ಘ-ಪ್ರಯಾಣದ ಪ್ರದೇಶಗಳಿಗೆ ಸರಕು ಸಾಗಾಣಿಕೆ ಮತ್ತು ಅಗತ್ಯ ವಸ್ತುಗಳನ್ನು ಸಾಗಿಸಲು ಬಳಸಲಾಗುತ್ತದೆ ಎಂದು ವಿಮಾನಯಾನ ಸಂಸ್ಥೆ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಸಂಸ್ಥೆಯು ಐದು ಬೋಯಿಂಗ್ 737 ವಿಮಾನಗಳು, ಮೂರು ಬೊಂಬಾರ್ಡಿಯರ್ ಕ್ಯೂ-400 ಮತ್ತು ಒಂದು ಏರ್ಬಸ್ ಎ-340 ಸೇರಿದಂತೆ ಒಟ್ಟು ಒಂಬತ್ತು ವಿಮಾನಗಳನ್ನು ಸರಕು ಸಾಗಾಣಿಕೆಗೆ ಮೀಸಲಿಟ್ಟಿದೆ ಎಂದು ಸ್ಪೈಸ್ ಜೆಟ್ ಅಧ್ಯಕ್ಷ ಅಜಯ್ ಸಿಂಗ್ ಹೇಳಿದ್ದಾರೆ.
ಅತೀ ಶೀಘ್ರದಲ್ಲೇ ಈ ವಿಮಾನಗಳು ಯುರೋಪ್, ಆಫ್ರಿಕಾ ಮತ್ತು ಸಿಐಎಸ್ ದೇಶಗಳಿಹೆ ತಡೆರಹಿತ ಸರಕು ಸೇವೆಗಳನ್ನು ಹೆಮ್ಮೆಯಿಂದ ನಿರ್ವಹಿಸಲಿದೆ. ಮಾರ್ಚ್ 25, 2020 ರಿಂದ 5600 ಕ್ಕೂ ಹೆಚ್ಚು ವಿಮಾನಗಳ ಮೂಲಕ 31,000 ಟನ್ ಸರಕುಗಳನ್ನು ಸಾಗಿಸಲಾಗಿದೆ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ.
ಸ್ಪೈಸ್ ಜೆಟ್ ಏರ್ ವೇಸ್ ಪ್ರಕಾರ, ರಾಸ್ ಅಲ್-ಖೈಮಾ ವಿಮಾನ ನಿಲ್ದಾಣವನ್ನು ತನ್ನ ಸರಕು ಕಾರ್ಯಾಚರಣೆಯ ಕೇಂದ್ರವಾಗಿ ಬಳಸುತ್ತಿದೆ ಎಂದು ತಿಳಿದುಬಂದಿದೆ.