ನವದೆಹಲಿ: ಕೊರೊನಾ ವೈರಸ್ ಹಬ್ಬುತ್ತಿರುವುದರ ಮಧ್ಯೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತ್ವರಿತವಾಗಿ ಅಕೌಂಟ್ ತೆರೆಯುವ ವ್ಯವಸ್ಥೆಯನ್ನು ಜಾರಿಗೊಳಿಸಿದೆ. ಇದಕ್ಕಾಗಿ ಗ್ರಾಹಕರು ಬ್ಯಾಂಕ್‌ಗೆ ಹೋಗುವ ಅಗತ್ಯವಿಲ್ಲ. ಎಸ್‌ಬಿಐನ ಯೊನೊ ಆ್ಯಪ್ ಮುಖಾಂತರ ತೆರೆಯಬಹುದಾಗಿದೆ.
ಎಸ್‌ಬಿಐ, ಆಧಾರ್ ಮುಖೇನ ತ್ವರಿತ ಡಿಜಿಟಲ್ ಉಳಿತಾಯ ಖಾತೆ ಸೌಲಭ್ಯವನ್ನು ಯೊನೊ ಪ್ಲಾಟ್‌ಫಾರ್ಮ್ ಬಳಸಿ ಆನ್‌ಲೈನ್ ಖಾತೆ ತೆರೆಯಲು ಬಯಸುವ ಗ್ರಾಹಕರಿಗೆ ಶುಕ್ರವಾರ ಒದಗಿಸುತ್ತಿದೆ.
ಯೊನೊ ಆ್ಯಪ್ ಸಮಗ್ರ ಬ್ಯಾಂಕಿಂಗ್ ಜೀವನಶೈಲಿಯ ಪ್ಲಾಟ್‌ಫಾರ್ಮ್ ಅನ್ನೇ ಬದಲಿಸುತ್ತಿದೆ. 'ಇನ್ಸ್ಟಾ ಸೇವಿಂಗ್ಸ್ ಬ್ಯಾಂಕ್ ಅಕೌಂಟ್' ಅನ್ನು ಕೇವಲ ಪ್ಯಾನ್ ಕಾರ್ಡ್ ಹಾಗೂ ಆಧಾರ್ ಸಂಖ್ಯೆ ಬಳಸಿ ಕಾಗದರಹಿತವಾಗಿ ತ್ವರಿತ ಡಿಜಿಟಲ್ ಖಾತೆ ತೆರೆಯಬಹುದು ಎಂದು ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಖಾತೆಯು ನಮ್ಮ ಸಂಭಾವ್ಯ ಗ್ರಾಹಕರಿಗೆ ಬ್ಯಾಂಕ್ ಶಾಖೆಗೆ ಭೇಟಿ ನೀಡದಯೇ ಅನುಕೂಲಕರ, ತಕರಾರು ಮುಕ್ತ ಮತ್ತು ಕಾಗದರಹಿತ ಬ್ಯಾಂಕಿಂಗ್ ಅನುಭವ ಒದಗಿಸುವ ವೈಶಿಷ್ಟ್ಯಗಳನ್ನು ಹೊಂದಿದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದರು.
ಇನ್ಸ್ಟಾ ಉಳಿತಾಯ ಬ್ಯಾಂಕ್ ಖಾತೆಯಡಿ ಹೊಸ ಖಾತೆದಾರರಿಗೆ ರುಪೇ ಎಟಿಎಂ ಕಮ್ ಡೆಬಿಟ್ ಕಾರ್ಡ್ ನೀಡುತ್ತದೆ.
ಖಾತೆ ತೆರೆಯಲು ಬಯಸುವ ಗ್ರಾಹಕರು ಯೊನೊ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಅದರಲ್ಲಿ ಪ್ಯಾನ್ ಮತ್ತು ಆಧಾರ್ ವಿವರ ನಮೂದಿಸಬೇಕು. ಒನ್ ಟೈಮ್ ಪಾಸ್‌ವರ್ಡ್ ಸಲ್ಲಿಸಿ, ಅಲ್ಲಿ ಕೇಳಲಾದ ವಿವರಗಳನ್ನು ಭರ್ತಿ ಮಾಡಬೇಕು ಎಂದು ತಿಳಿಸಿದೆ.
ಎಸ್‌ಎಂಎಸ್ ಎಚ್ಚರಿಕೆ ಮತ್ತು ಎಸ್‌ಬಿಐನ ಮಿಸ್ಡ್ ಕಾಲ್ ಸೇವೆಯೊಂದಿಗೆ ಖಾತೆದಾರರಿಗೆ ನಾಮನಿರ್ದೇಶನ ಸೌಲಭ್ಯ ನೀಡಲಿದೆ. ಒಮ್ಮೆ ಪ್ರಕ್ರಿಯೆ ಪೂರ್ಣಗೊಂಡ ನಂತರ ಖಾತೆದಾರ ಅವನ / ಅವಳ ಖಾತೆ ತ್ವರಿತವಾಗಿ ಸಕ್ರಿಯಗೊಳ್ಳುತ್ತದೆ. ಆ ಕ್ಷಣದಿಂದಲೇ ವ್ಯವಹಾರವನ್ನು ಪ್ರಾರಂಭಿಸಬಹುದು.