ಮುಂಬೈ:ದೇಶದ ಅತಿದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಮೊಬೈಲ್ ಬ್ಯಾಂಕಿಂಗ್ ಆ್ಯಪ್ ಯೋನೊದಲ್ಲಿ ಕೆವೈಸಿ (ನಿಮ್ಮ ಗ್ರಾಹಕರನ್ನು ತಿಳಿಯಿರಿ) ಆಧಾರಿತ ಉಳಿತಾಯ ಖಾತೆ ತೆರೆಯುವ ಫೀಚರ್ ಬಿಡುಗಡೆ ಮಾಡಿದೆ.
ಕೃತಕ ಬುದ್ಧಿಮತ್ತೆ ಮತ್ತು ಮುಖ ಗುರುತಿಸುವಿಕೆ ತಂತ್ರಜ್ಞಾನದ ನೆರವಿನಿಂದ ಸಂಪರ್ಕವಿಲ್ಲದ ಮತ್ತು ಕಾಗದರಹಿತ ಪ್ರಕ್ರಿಯೆಯಾಗಿದೆ ಎಂದು ಎಸ್ಬಿಐ ಪ್ರಕಟಣೆಯಲ್ಲಿ ತಿಳಿಸಿದೆ.
ಗ್ರಾಹಕರ ಸುರಕ್ಷತೆ, ಆರ್ಥಿಕ ಭದ್ರತೆ ಮತ್ತು ವೆಚ್ಚ ಪರಿಣಾಮಕಾರಿತ್ವ ಖಚಿತಪಡಿಸಿಕೊಳ್ಳಲು ಇದೊಂದು ಉತ್ತಮ ಹೆಜ್ಜೆಯಾಗಿದೆ. ಈ ಉಪಕ್ರಮವು ಮೊಬೈಲ್ ಬ್ಯಾಂಕಿಂಗ್‌ಗೆ ಹೊಸ ಆಯಾಮ ನೀಡುತ್ತದೆ. ಗ್ರಾಹಕರು ತಮ್ಮ ಬ್ಯಾಂಕಿಂಗ್ ಅಗತ್ಯಗಳಿಗಾಗಿ ಡಿಜಿಟಲ್‌ಗೆ ಮೊರೆ ಹೋಗಲು ನೆರವಾಗಲಿದೆ ಎಂದು ನಾವು ನಂಬುತ್ತೇವೆ ಎಂದು ಬ್ಯಾಂಕಿನ ಅಧ್ಯಕ್ಷ ದಿನೇಶ್ ಖಾರಾ ತಿಳಿಸಿದ್ದಾರೆ.
ಹೊಸ ಉಳಿತಾಯ ಖಾತೆ ತೆರೆಯಲು ಯೋಜಿಸುವ ಗ್ರಾಹಕರಿಗೆ ಈ ವೈಶಿಷ್ಟ್ಯವು ಲಭ್ಯವಿರುತ್ತದೆ. ಈ ಹೊಸ ಸೌಲಭ್ಯವನ್ನು ಪಡೆಯಲು ಯೋನೊ ಅಪ್ಲಿಕೇಷನ್ ಡೌನ್‌ಲೋಡ್ ಮಾಡಬೇಕಾಗುತ್ತದೆ. ನ್ಯೂ ಟು ಎಸ್ಬಿಐ ಕ್ಲಿಕ್ ಮಾಡಿ ಮತ್ತು 'ಇನ್‌ಸ್ಟಾ ಪ್ಲಸ್ ಉಳಿತಾಯ ಖಾತೆ' ಆಯ್ಕೆಮಾಡಿ.
ಗ್ರಾಹಕರು ತಮ್ಮ ಆಧಾರ್ ವಿವರಗಳನ್ನು ಅಪ್ಲಿಕೇಷನ್‌ನಲ್ಲಿ ನಮೂದಿಸಬೇಕಾಗುತ್ತದೆ. ಆಧಾರ್ ದೃಢೀಕರಣ ಪೂರ್ಣಗೊಂಡ ನಂತರ, ಅವರು ವೈಯಕ್ತಿಕ ವಿವರಗಳನ್ನು ಭರ್ತಿ ಮಾಡಬೇಕು. ಕೆವೈಸಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ವಿಡಿಯೋ ಕರೆ ನಿಗದಿಪಡಿಸಬೇಕು. ವಿಡಿಯೋ ಕೆವೈಸಿ ಯಶಸ್ವಿಯಾಗಿ ಪೂರ್ಣಗೊಂಡ ನಂತರ, ಖಾತೆಯನ್ನು ಸ್ವಯಂಚಾಲಿತವಾಗಿ ತೆರೆಯಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ನವೆಂಬರ್ 2017ರಲ್ಲಿ ಪ್ರಾರಂಭವಾದ ಯೋನೊ 3.7 ಕೋಟಿ ನೋಂದಾಯಿತ ಬಳಕೆದಾರರನ್ನು ಹೊಂದಿದೆ. ಯೋನೊ ಪ್ಲಾಟ್‌ಫಾರ್ಮ್‌ನಲ್ಲಿ 20ಕ್ಕೂ ಹೆಚ್ಚು ಪ್ಲಸ್ ವಿಭಾಗಗಳಲ್ಲಿ 100ಕ್ಕೂ ಹೆಚ್ಚು ಇ-ಕಾಮರ್ಸ್ ಉದ್ಯಮಗಳ ಜತೆ ಬ್ಯಾಂಕ್ ಪಾಲುದಾರಿಕೆ ಹೊಂದಿದೆ.