ನವದೆಹಲಿ:ಆರ್ಬಿಐ ತನ್ನ ವಿತ್ತೀಯ ಪರಾಮರ್ಶೆ ನೀತಿ ಸಭೆಯಲ್ಲಿ ರೆಪೋ ದರ ಕಡಿತಗೊಳಿಸಿದ ಬೆನ್ನಲ್ಲೇ ದೇಶದ ಅತಿ ದೊಡ್ಡ ಸಾಲದಾತ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ತನ್ನ ಬೆಂಚ್ಮಾರ್ಕ್ನ ಎಲ್ಲ ವಿಧದ ಸಾಲ ಬಡ್ಡಿ ದರದಲ್ಲಿ ಕಡಿತಗೊಳಿಸಿದೆ.
ನಿಧಾನಗತಿಯ ಆರ್ಥಿಕತೆಯ ಹಿನ್ನೆಲೆಯಲ್ಲಿ ಕೇಂದ್ರೀಯ ಬ್ಯಾಂಕ್ ನಿರೀಕ್ಷೆಗಿಂತ ಹೆಚ್ಚಿನ ಪ್ರಮಾಣದಲ್ಲಿ 35 ಬೇಸಿಸ್ ಪಾಯಿಂಟ್‌ಗಳನ್ನು ಕಡಿತಗೊಳಿಸಿದೆ. ಪ್ರತಿಯಾಗಿ ಎಸ್‌ಬಿಐ ತನ್ನ ಬಡ್ಡಿ ದರದಲ್ಲಿ 15 ಬೇಸಿಸ್ ಪಾಯಿಂಟ್‌ಗಳನ್ನು ಇಳಿಕೆ ಮಾಡಿದೆ.
ಎಸ್‌ಬಿಐನ ಒಂದು ವರ್ಷದ ಕನಿಷ್ಠ ವೆಚ್ಚ ನಿಧಿ ಆಧಾರಿತ ಸಾಲ ದರ ಅಥವಾ ಎಂಸಿಎಲ್‌ಆರ್, ಪರಿಷ್ಕೃತ ಬಡ್ಡಿ ದರವು ಆಗಸ್ಟ್ 10ರಿಂದ ಜಾರಿಗೆ ಬರಲಿದೆ. ವಾರ್ಷಿಕ ದರವು ಶೇ 8.40 ರಿಂದ ಶೇ 8.25ಕ್ಕೆ ಆಗಲಿದೆ ಎಂದು ಎಸ್‌ಬಿಐ ಹೇಳಿಕೆಯಲ್ಲಿ ತಿಳಿಸಿದೆ.
ಆರ್ಬಿಐ ಬ್ಯಾಂಕ್ಗಳಿಗೆ ನೀಡುವ ಸಾಲದ ಮೇಲಿನ ಬಡ್ಡಿದರ ಇಳಿಕೆ ಮಾಡಿದ್ದು, ಪ್ರಸಕ್ತ ಆರ್ಥಿಕ ವರ್ಷದಲ್ಲಿ ಸತತ 4ನೇ ಬಾರಿಗೆ ಇಳಿಸಿದಂತಾಗಿದೆ. ಜೂನ್ ಮೊದಲ ವಾರದಲ್ಲಿ ರೆಪೋ ದರ ಶೇ 5.75 ಆಗಿತ್ತು. ಶೇ 0.35ರಷ್ಟು ಬೇಸಿಸ್ ಪಾಯಿಂಟ್ಸ್ ಇಳಿಕೆ ಮಾಡುವ ಮೂಲಕ ಶೇ 5.75ರಿಂದ ಶೇ 5.40ಕ್ಕೆ ಇಳಿಕೆ ಮಾಡಿದೆ.