ನವದೆಹಲಿ: ಗಡಿಯಾರ ಮಾರಾಟಗಾರ ಟೈಟಾನ್ ಕಂಪನಿ ಲಿಮಿಟೆಡ್ 'ಟೈಟಾನ್ ಪೇ' ಪರಿಚಯಿಸಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಜತೆ ಪಾಲುದಾರಿಕೆ ಒಪ್ಪಂದ ಮಾಡಿಕೊಂಡಿದ್ದು, ಇದು ಎಸ್‌ಬಿಐ ಖಾತೆದಾರರಿಗೆ ಸಂಪರ್ಕವಿಲ್ಲದ ಪಾವತಿ ಮಾಡಲು ಅನುವು ಮಾಡಿಕೊಡುತ್ತದೆ.
ಈ ಪಾಲುದಾರಿಕೆಯ ಮೂಲಕ ಟೈಟಾನ್ ಮತ್ತು ಎಸ್‌ಬಿಐ ಭಾರತದಲ್ಲಿ ಮೊದಲ ಬಾರಿಗೆ ಸಂಪರ್ಕವಿಲ್ಲದ ಪಾವತಿ ಮಾಡಬಹುದಾದ ಹೊಸ ಕೈಗಡಿಯಾರಗಳನ್ನು ಬಿಡುಗಡೆ ಮಾಡಿದೆ.
ಈ ಉತ್ಪನ್ನವು ಗ್ರಾಹಕರ ಬ್ಯಾಂಕಿಂಗ್ ಅಗತ್ಯಗಳನ್ನು ಪೂರೈಸುವುದಲ್ಲದೆ, ಬದಲಾಗುತ್ತಿರುವ ಗ್ರಾಹಕರಿಗೆ ಶ್ರೇಷ್ಠ ಮತ್ತು ಅತ್ಯಾಧುನಿಕ ವಿನ್ಯಾಸಗಳೊಂದಿಗೆ ಸೇವೆ ಸಲ್ಲಿಸುತ್ತದೆ ಎಂದು ಟೈಟಾನ್ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಸಿ.ಕೆ.ವೆಂಕಟರಮಣ ಹೇಳಿದ್ದಾರೆ.
ಹೊಸ ಸೇವೆಯು 'ಟ್ಯಾಪ್ ಆ್ಯಂಡ್ ಪೇ' ತಂತ್ರಜ್ಞಾನದೊಂದಿಗೆ ಎಸ್‌ಬಿಐ ಗ್ರಾಹಕರಿಗೆ ಶಾಪಿಂಗ್ ಅನುಭವವನ್ನು ಮರು ವ್ಯಾಖ್ಯಾನಿಸುತ್ತದೆ ಎಂದು ಎಸ್‌ಬಿಐ ಅಧ್ಯಕ್ಷ ರಜನೀಶ್ ಕುಮಾರ್ ಹೇಳಿದ್ದಾರೆ.
ಎಸ್‌ಬಿಐ ಖಾತೆದಾರರು ತಮ್ಮ ಟೈಟಾನ್ ಪೇ ವಾಚ್ ಅನ್ನು ಸಂಪರ್ಕವಿಲ್ಲದ ಪಾವತಿ ಪಿಒಎಸ್ ಯಂತ್ರದಲ್ಲಿ ಟ್ಯಾಪ್ ಮಾಡಬಹುದು. ಪಿನ್ ನಮೂದಿಸದೆ ಅಥವಾ ಎಸ್‌ಬಿಐ ಬ್ಯಾಂಕ್ ಕಾರ್ಡ್ ಸ್ವೈಪ್ ಮಾಡದೆ 2,000 ರೂ. ವರೆಗೆ ಪಾವತಿ ಮಾಡಬಹುದು ಎಂದು ಟೈಟಾನ್‌ನ ಪ್ರಕಟಣೆಯಲ್ಲಿ ತಿಳಿಸಿದೆ.
ಈ ಸೌಲಭ್ಯ ಪಡೆಯಲು ಎಸ್‌ಬಿಐ ಗ್ರಾಹಕರು ಮೊದಲು ತಮ್ಮನ್ನು ಯೋನೊ ಮೊಬೈಲ್ ಅಪ್ಲಿಕೇಷನ್‌ನಲ್ಲಿ ನೋಂದಣಿ ಮಾಡಿಕೊಳ್ಳಬೇಕಾಗುತ್ತದೆ. ಈ ಕೈಗಡಿಯಾರಗಳ ಟೈಟಾನ್ ಪುರುಷರಿಗೆ 3 ಶೈಲಿ ಮತ್ತು ಮಹಿಳೆಯರಿಗೆ 2 ಶೈಲಿಗಳನ್ನು ಬಿಡುಗಡೆ ಮಾಡಿದೆ. ಈ ಕೈಗಡಿಯಾರಗಳ ದರ 2,995 ರೂ.ಯಿಂದ 5,995 ರೂ. ವರೆಗಿದೆ.