ನವದೆಹಲಿ :ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಸೇರಿ ಹಲವು ಬ್ಯಾಂಕ್ಗಳು ಶೂನ್ಯ ಉಳಿತಾಯ ಖಾತೆ (ಝೀರೋ ಬ್ಯಾಲೆನ್ಸ್) ಅಥವಾ ಸಾಮಾನ್ಯ ಉಳಿತಾಯ ಬ್ಯಾಂಕ್ ಠೇವಣಿ ಖಾತೆ (ಬಿಎಸ್‌ಬಿಡಿಎ) ಹೊಂದಿರುವ ಬಡವರಿಗೆ ಒದಗಿಸುವ ಕೆಲ ಸೇವೆಗಳಿಗೆ ಹೆಚ್ಚಿನ ಶುಲ್ಕ ವಿಧಿಸುತ್ತಿವೆ ಎಂದು ಐಐಟಿ-ಬಾಂಬೆ ಅಧ್ಯಯನ ಬಹಿರಂಗಪಡಿಸಿದೆ.
ಬಿಎಸ್‌ಬಿಡಿಎ ಖಾತೆದಾರರು ನಿಗದಿತ ನಾಲ್ಕು ವಹಿವಾಟು ಮೀರಿದ ಪ್ರತಿ ಡೆಬಿಟ್ಗೆ 17.70 ರೂ. ಶುಲ್ಕ ವಿಧಿಸುವ ಎಸ್‌ಬಿಐ ನಿರ್ಧಾರ ಸಮಂಜಸವಲ್ಲ ಎಂದು ಅಧ್ಯಯನ ಹೇಳಿದೆ. ಸೇವಾ ಶುಲ್ಕ ವಿಧಿಸಿ 2015-20ರ ಅವಧಿಯಲ್ಲಿ ಎಸ್‌ಬಿಐನ ಸುಮಾರು 12 ಕೋಟಿ ಬೇಸಿಕ್ ಸೇವಿಂಗ್ಸ್ ಬ್ಯಾಂಕ್ ಠೇವಣಿ ಖಾತೆ (ಬಿಎಸ್‌ಬಿಡಿಎ) ಹೊಂದಿರುವವರಿಂದ 300 ಕೋಟಿ ರೂ. ಸಂಗ್ರಹಿಸಿದೆ.
3.9 ಕೋಟಿ ಬಿಎಸ್‌ಬಿಡಿ ಖಾತೆ ಹೊಂದಿರುವ ಭಾರತದ ಎರಡನೇ ಅತಿದೊಡ್ಡ ಸಾರ್ವಜನಿಕ ವಲಯದ ಸಾಲದಾತ ಪಂಜಾಬ್ ನ್ಯಾಷನಲ್ ಬ್ಯಾಂಕ್ ಇದೇ ಅವಧಿಯಲ್ಲಿ 9.9 ಕೋಟಿ ರೂ. ಜಮಾ ಮಾಡಿದೆ. ಕೆಲ ಬ್ಯಾಂಕ್ಗಳು ಬಿಎಸ್‌ಬಿಡಿಎಗಳ ಮೇಲಿನ ಆರ್‌ಬಿಐ ನಿಯಮಗಳನ್ನು ವ್ಯವಸ್ಥಿತವಾಗಿ ಉಲ್ಲಂಘಿಸಿದೆ. ಪ್ರತಿ ಡೆಬಿಟ್ ವಹಿವಾಟಿಗೆ (ಡಿಜಿಟಲ್ ವಿಧಾನಗಳ ಮೂಲಕವೂ) ತಿಂಗಳಿಗೆ ನಾಲ್ಕು ವಹಿವಾಟು ನಿಗದಿಪಡಿಸಿ 17.70 ರೂ. ವಸೂಲಿ ಮಾಡುತ್ತಿವೆ.