ನವದೆಹಲಿ:ದೇಶದ ಸಾರ್ವಜನಿಕ ವಲಯದ ಅತಿದೊಡ್ಡ ಬ್ಯಾಂಕ್ ಆದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್‌ಬಿಐ) ಪಿಂಚಣಿ ಖಾತೆದಾರರಿಗೆ ನಿಗದಿತ ಗಡುವು ನೀಡಿ ಎಚ್ಚರಿಕೆಯ ಸಂದೇಶ ರವಾನಿಸಿದೆ.
ಬ್ಯಾಂಕ್ ಗ್ರಾಹಕ ಪಿಂಚಣಿದಾರರು ತಮ್ಮ ಜೀವಿತ ಪ್ರಮಾಣಪತ್ರ ಅಥವಾ ಜೀವನ್ ಪ್ರಮಾನ್ ಪತ್ರವನ್ನು ಹತ್ತಿರದ ಬ್ಯಾಂಕ್ ಶಾಖೆಗಳಲ್ಲಿ ಅಥವಾ ಆನ್‌ಲೈನ್ ಮುಖಾಂತರ ಈ ತಿಂಗಳ ಅಂತ್ಯದೊಳಗೆ ಸಲ್ಲಿಸುವಂತೆ ಎಸ್‌ಬಿಐ ಕೇಳಿಕೊಂಡಿದೆ.
ನಿಮ್ಮ ಪಿಂಚಣಿ ಪಾವತಿಗಳು ಮುಂದುವರಿಯುತ್ತವೆಯೇ ಎಂದು ಖಚಿತಪಡಿಸಿಕೊಳ್ಳಲು ನಿಮ್ಮ ಲೈಫ್ ಸರ್ಟಿಫಿಕೇಟ್ ಸಲ್ಲಿಕೆಯನ್ನು 2019ರ ನವೆಂಬರ್ 30ರ ಒಳಗೆ ಸಲ್ಲಿಸಿ. ಪ್ರಮಾಣಪತ್ರವನ್ನು ನಿಮ್ಮ ಹತ್ತಿರದ ಎಸ್‌ಬಿಐ ಶಾಖೆಗೆ ಭೇಟಿ ಕೊಟ್ಟು ಖುದ್ದಾಗಿ ಅಥವಾ ನಿಮ್ಮ ಹತ್ತಿರವಿರುವ ಆಧಾರ್ ಔಟ್‌ಲೆಟ್‌ನಲ್ಲಿ ಡಿಜಿಟಲ್ ರೂಪದಲ್ಲಿ ಸಲ್ಲಿಸಬಹುದು ಎಂದು ಎಸ್‌ಬಿಐ ಟ್ವೀಟ್‌ನಲ್ಲಿ ತಿಳಿಸಿದೆ.
ನವೆಂಬರ್ 30ರ ಗಡುವಿನ ಒಳಗೆ ಪಿಂಚಣಿ ವಿತರಣಾ ಏಜೆನ್ಸಿಗಳ ಜೀವಿತ ಪ್ರಮಾಣಪತ್ರವನ್ನು ಸಲ್ಲಿಸಲು ವಿಫಲವಾದರೆ ಪಿಂಚಣಿ ಪಡೆಯಲು ಹಿನ್ನಡೆ ಆಗಬಹುದು. ಪಿಂಚಣಿ ಖಾತೆದಾರರು ಪ್ರಮಾಣಪತ್ರ ಸಲ್ಲಿಸಿದ ನಂತರ ಪಾವತಿಯನ್ನು ಪುನರಾರಂಭಿಸಲಾಗುತ್ತದೆ.