ನವದೆಹಲಿ: ಓಯೋ ಹೋಟೆಲ್ ಸಂಸ್ಥಾಪಕ ರಿತೇಶ್ ಅಗರ್ವಾಲ್ ಅವರು ವಿಶ್ವದ ಎರಡನೇ ಕಿರಿಯ ಬಿಲಿಯನೇರ್ ಎಂಬ ಶ್ರೇಯಸ್ಸಿಗೆ ಪಾತ್ರರಾಗಿದ್ದಾರೆ.
ರಿತೇಶ್ ಅವರು ತಮ್ಮ 24ನೇ ವಯಸ್ಸಿನಲ್ಲಿ 1.1 ಬಿಲಿಯನ್ ಡಾಲರ್ (₹ 7,800 ಕೋಟಿ) ಮೌಲ್ಯದಷ್ಟು ಸಂಪತ್ತು ಹೊಂದಿದ್ದಾರೆ. ಕಾಸ್ಮೆಟಿಕ್ ರಾಣಿ ಕೈಲಿ ಜೆನ್ನರ್ 22ನೇ ವಯಸ್ಸಿನಲ್ಲಿ 1.1 ಬಿಲಿಯನ್ ಡಾಲರ್ ಮುಖೇನ ಪ್ರಥಮ ಸ್ಥಾನದಲ್ಲಿದ್ದಾರೆ ಎಂದು ಹುರೆನ್ ಜಾಗತಿಕ ಶ್ರೀಮಂತರ ಪಟ್ಟಿಯ 2020ರ ವರದಿಯಲ್ಲಿ ತಿಳಿಸಿದೆ.
2013ರಲ್ಲಿ ಸಾಫ್ಟ್ಬ್ಯಾಂಕ್ ಓಯೋ ಹೋಟೆಲ್ ಸ್ಥಾಪಿಸಿದ ರಿತೇಶ್, ಈಗಾಗಲೇ ಅದು ಭಾರತದ ಅತಿದೊಡ್ಡ ಹೋಟೆಲ್ ಜಾಲ ಎಂಬ ಹೆಗ್ಗಳಿಕೆಗೆ ಕೂಡ ಪಾತ್ರವಾಗಿದೆ. ಇದರ ಒಟ್ಟಾರೆ ಮೌಲ್ಯ 10 ಬಿಲಿಯನ್ ಡಾಲರ್ ಆಗಿದೆ.
ಕಾಲೇಜಿನಿಂದ ಡ್ರಾಪ್ ಔಟ್ ಆಗಿರುವ ರಿತೇಶ್ ಅಗರ್ವಾಲ್ ಅವರು 40 ವರ್ಷದೊಳಗಿನ ಸೆಲ್ಫ್ ಮೇಡ್ ಭಾರತೀಯ ಶ್ರೀಮಂತರಾಗಿದ್ದಾರೆ. ಅವರು ಫ್ಲಿಪ್ಕಾರ್ಟ್ ಸಹ-ಸಂಸ್ಥಾಪಕರಾದ ಸಚಿನ್ ಬನ್ಸಾಲ್ ಮತ್ತು ಬಿನ್ನಿ ಬನ್ಸಾಲ್ (ತಲಾ 1 ಬಿಲಿಯನ್) ಮತ್ತು ಬೈಜಸ್ ರವೀಂದ್ರನ್ ಕುಟುಂಬದ (41.4 ಬಿಲಿಯನ್) ನಡೆಯನ್ನು ಅನುಸರಿಸಿದ್ದಾರೆ.
ಯುವ ಮತ್ತು ಶ್ರೀಮಂತ ಪಟ್ಟಿಯಲ್ಲಿ 40 ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನ 90 ಶತಕೋಟ್ಯಾಧಿಪತಿಗಳು ಇದ್ದಾರೆ. ಕಳೆದ ವರ್ಷಕ್ಕಿಂತ ಐವರು ಹೆಚ್ಚಾಗಿದ್ದಾರೆ. ಅವರಲ್ಲಿ 54 ಶತಕೋಟ್ಯಾಧಿಪತಿಗಳು ಸ್ವಯಂ ನಿರ್ಮಿತ ಬಿಲಿಯನೇರ್ಗಳು ಇದ್ದು, 36 ಜನ ಆನುವಂಶಿಕ ಸಂಪತ್ತು ಪಡೆದಿದ್ದಾರೆ. ಈ ಪಟ್ಟಿಯಲ್ಲಿ ಚೀನಾ ಮತ್ತು ಅಮೆರಿಕ ತಲಾ 25 ಯುವ ಬಿಲಿಯನೇರ್ಗಳನ್ನು ಹೊಂದಿವೆ.
ಭಾರತವು 2020ರಲ್ಲಿ ಒಟ್ಟು 137 ಶತಕೋಟ್ಯಾಧಿಪತಿಗಳನ್ನು ಹೊಂದಿದ್ದು, ಕಳೆದ ವರ್ಷಕ್ಕಿಂತ 33ರಷ್ಟು ಹೆಚ್ಚಾಗಿದೆ. 67 ಬಿಲಿಯನ್ ಡಾಲರ್ ಸಂಪತ್ತಿನೊಂದಿಗೆ, ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ ಒಂಬತ್ತನೇ ಶ್ರೀಮಂತ ಆಗಿದ್ದಾರೆ.
ಭಾರತದ ಬಿಲಿಯನೇರ್ ನಗರಗಳ ಪೈಕಿ ಮುಂಬೈನಲ್ಲಿ ಅತ್ಯಧಿಕ 50 ಶತಕೋಟ್ಯಾಧಿಪತಿಗಳು ಇದ್ದಾರೆ. ಬೆಂಗಳೂರಿನಲ್ಲಿ 17, ಅಹಮದಾಬಾದ್ನಲ್ಲಿ 12 ಹಾಗೂ ಹೈದರಾಬಾದ್ನಲ್ಲಿ ಕೂಡ 17 ಬಿಲಿಯನೇರ್ಗಳು ಇದ್ದಾರೆ.
2023ರ ವೇಳೆಗೆ ವಿಶ್ವದ ಅತಿದೊಡ್ಡ ಹೋಟಲ್ ಜಾಲತಾಣದ ಗುರಿ ಇರಿಸಿಕೊಂಡಿರುವ ಓಯೋ, ಅಮೆರಿಕ, ಯುರೋಪ್ ಹಾಗೂ ಚೀನಾದಲ್ಲಿ ದೊಡ್ಡ ಸ್ಟಾರ್ಟ್ಅಪ್ ಉದ್ಯಮ ಎಂಬ ಹೆಗ್ಗಳಿಕೆ ಇದಕ್ಕಿದೆ.